ಸಿದ್ದಾಪುರ, ಏ. ೮: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಗುಹ್ಯ ಗ್ರಾಮದಲ್ಲಿ ರೂ. ೭೨ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆ ಹಾಗೂ ತಡೆಗೋಡೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ನೀರಾವರಿ ನಿಗಮದ ವತಿಯಿಂದ ಗುಹ್ಯ ಗ್ರಾಮದ ಕೂಡುಗದ್ದೆ ವ್ಯಾಪ್ತಿಯಲ್ಲಿ ರೂ. ೫೦ ಲಕ್ಷ ವೆಚ್ಚದ ತಡೆಗೋಡೆಯನ್ನು ಹಾಗೂ ಬಿಜಿಎಸ್ ಶಾಲೆಗೆ ತೆರಳುವ ರೂ. ೧೨ ಲಕ್ಷ ವೆಚ್ಚದ ರಸ್ತೆಯನ್ನು ಉದ್ಘಾಟಿಸಿದರು.

ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನದಿ ತೀರದ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದಾಪುರ ಸಮೀಪದಲ್ಲಿ ೧೨ ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಬೋಪಯ್ಯ ಹೇಳಿದರು. ಖಾಸಗಿ ವ್ಯಕ್ತಿಗಳಿಂದ ಜಾಗವನ್ನು ಖರೀದಿಸಲಾಗುವುದು ಎಂದರು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಶಾಶ್ವತ ಯೋಜನೆಯನ್ನು ಸಂತ್ರಸ್ತರಿಗೆ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್, ಪಿಡಿಓ ಮನು ಮೋಹನ್, ಕಾರ್ಯದರ್ಶಿ ಮೋಹನ್, ಗ್ರಾ.ಪಂ. ಸದಸ್ಯರುಗಳು ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.