*ಗೋಣಿಕೊಪ್ಪ, ಏ. ೮: ತಿತಿಮತಿ ಗ್ರಾಮದ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ ಧಾರ್ಮಿಕ ಆಚರಣೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು. ಮೂರು ದಿನಗಳು ನಡೆದ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಮುತ್ತಪ್ಪ, ತಿರುವಪ್ಪ ಇನ್ನಿತರ ದೇವರುಗಳ ದರ್ಶನ ಪಡೆದು ಪುನೀತರಾದರು.
ಕಳೆದ ಎರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾತ್ರೆ ಉತ್ಸವಗಳು ನಡೆದಿರಲಿಲ್ಲ.
ಕೊರೊನಾ ನಂತರದ ದಿನಗಳಲ್ಲಿ ಪ್ರಥಮವಾಗಿ ಮುತ್ತಪ್ಪ ಜಾತ್ರೆ ಮಹೋತ್ಸವ ಜರುಗಿರುವುದು ದೈವಭಕ್ತರನ್ನು ಆಧ್ಯಾತ್ಮಿಕತೆಯೆಡೆಗೆ ಹೆಚ್ಚಾಗಿ ಸೆಳೆಯಿತು.
ಈ ಕಾರಣ ಕರಡಿಕೊಪ್ಪ ಮುತ್ತಪ್ಪ ಜಾತ್ರೆಯಲ್ಲಿ ಸ್ಥಳೀಯ ಗ್ರಾಮಸ್ಥರಲ್ಲದೆ ಸಮೀಪದ ಗ್ರಾಮಸ್ಥರು, ಊರಿನವರು ಕುಟುಂಬ ಸಮೇತವಾಗಿ ಪಾಲ್ಗೊಂಡು ದೇವರುಗಳಿಗೆ ಹರಕೆ, ಕಾಣಿಕೆಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಮೊದಲ ದಿನದಲ್ಲಿ ಗಣಪತಿ ಹೋಮ, ನಂತರ ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಮೌನ ಜ್ಞಾನ ನಡೆಯಿತು. ಸಂಜೆ ಬಾಳುಮನಿ ಗಣಪತಿ ದೇವಸ್ಥಾನದಿಂದ ಕಲಶ ತಂದು ತೀರ್ಥ ಪ್ರಸಾದ ವಿತರಿಸಲಾಯಿತು.
ನಂತರ ಎರಡು ದಿನಗಳು ಮುತ್ತಪ್ಪನ್, ತಿರುವಪ್ಪನ್, ಕಾರಣೋರ್, ಪೋದಿ, ವಸೂರಿ ಮಲಾ, ಗುಳಿಗನ್, ಕಂಡಕರ್ಣನ್, ವಿಷ್ಣುಮೂರ್ತಿ, ಶಾಸ್ತಪ್ಪನ್ (ಕುಟ್ಟಿಚಾತನ್) ತೆರೆಗಳು ನೆರದ ಭಕ್ತಾದಿಗಳಿಗೆ ದರ್ಶನ ನೀಡಿತು. ಮೂರು ದಿನಗಳು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಮೂರು ಹೊತ್ತು ಅನ್ನಪ್ರಸಾದ ವಿತರಿಸಲಾಯಿತು.