ಹೆಬ್ಬಾಲೆ, ಏ. ೭: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಮೀಪದ ಹನುಮಂತಪುರ (ಸೂಳೆ ಕೋಟೆ) ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದ ವತಿಯಿಂದ ಏರ್ಪಡಿಸಿದ್ದ ಶ್ರೀ ಆಂಜನೇಯ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ತಮ್ಮ ತಮ್ಮ ಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟರಮಣ ಸ್ವಾಮಿ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆದವು.

ಕಾವೇರಿ ನದಿಗೆ ಪೂಜೆ ಸಲ್ಲಿಸಿ ವಿವಿಧ ಪುಷ್ಪ ಮತ್ತು ಭಗಧ್ವಜಗಳಿಂದ ಸಿಂಗರಿಸಲಾಗಿದ್ದ ರಥಕ್ಕೆ ಸೀತಾ ರಾಮ ಸೇರಿದಂತೆ ಆಂಜನೇಯ ಸ್ವಾಮಿಯ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ನಂತರ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಬೆಟ್ಟದಪುರ ಸಲಿಲಾಖ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹಾಗೂ ತಾಲೂಕು ತಹಶೀಲ್ದಾರ್ ಕೆ. ಚಂದ್ರಮೌಳಿ ಅವರು ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳು ರಥವನ್ನು ಎಳೆಯುತ್ತ ಜೈ.ಜೈ ಹನುಮ ಎಂಬ ಷೋಷಣೆಗಳನ್ನು ಕೂಗುತ್ತ ತಮ್ಮ ಭಕ್ತಿ ಮೆರೆದರು. ಕಾವೇರಿ ನದಿಯಿಂದ ಶ್ರೀ ಆನಂಜನೇಯ ದೇವಸ್ಥಾನದವರೆಗೆ ರಥದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಂದರ್ಭ ನೆರೆದಿದ್ದ ಭಕ್ತಾದಿಗಳು ಹೂ ಜವನವನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಅರ್ಪಿಸಿದರು. ಹರಕೆ ಹೊತ್ತ ಭಕ್ತಾದಿಗಳು, ಅಂಗಡಿ ವ್ಯಾಪಾರಿಗಳು ರಥೋತ್ಸವದ ಸಂದರ್ಭ ಈಡುಗಾಯಿ ಹೊಡೆದು ಪಾನಕ ವಿತರಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್. ಸಿಂಗ್ರಿಶೆಟ್ಟರು, ಕಾರ್ಯದರ್ಶಿ ಎಂ.ಕೆ. ಶಿವರಾಮ್ ಹಾಗೂ ಖಜಾಂಚಿ ಎಸ್.ಎ. ಕುಮಾರಸ್ವಾಮಿ ನೇತೃತ್ವದಲ್ಲಿ ರಥೋತ್ಸವದ ಪೂಜಾ ಕಾರ್ಯಗಳು ನಡೆದವು. ರಥೋತ್ಸವಕ್ಕೆ ಕೊಡಗು ಮತ್ತು ಹಾಸನ ಜಿಲ್ಲೆಗಳ ಗಡಿ ಪ್ರದೇಶದ ಜನರು ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನ ಭಕ್ತರು ಪಾಲ್ಗೊಂಡಿದ್ದರು. ಆಂಜನೇಯ ಸ್ವಾಮಿಯ ಸಹೋದರಿ ದೇವಸ್ಥಾನವಾದ ಶ್ರೀ ದೆಂಡಮ್ಮ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದ ಅಧ್ಯಕ್ಷ ಎಚ್.ಬಿ.ನಾಗೇಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಿಗ್ಗೆಯಿಂದಲೇ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದಾನಿಗಳಾದ ಶ್ಯಾನಬೋಗನಹಳ್ಳಿಯ ಪಾರ್ವತಮ್ಮ ಮತ್ತು ಕುಟುಂಬಸ್ಥರು ಅನ್ನ ಸಂತರ್ಪಣೆ ಮಾಡಿದ್ದರು. ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಪ್ರಕಾಶ್ ಎಂ. ಹಿತ್ತಲದಿನ್ನಿ ನೇತೃತ್ವದಲ್ಲಿ ರಥೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.