ಸೋಮವಾರಪೇಟೆ, ಏ. ೭: ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ತಾ. ೧೦ ರಂದು ಪಟ್ಟಣದಲ್ಲಿ ಶೋಭಾ ಯಾತ್ರೆಯೊಂದಿಗೆ ರಾಮನವಮಿ ಉತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಶ್ರೀ ರಾಮನವಮಿ ಅಂಗವಾಗಿ ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳ ಮೂಲಕ ಅಲಂಕರಿಸಲಾಗಿದ್ದು, ವಾಹನಗಳಲ್ಲಿಯೂ ಕೇಸರಿ ಧ್ವಜಗಳನ್ನು ಅಳವಡಿಸಲಾಗಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಂಪೂರ್ಣ ಕೇಸರಿಮಯವಾಗಿದೆ.
ತಾ. ೧೦ ರಂದು ರಾಮನವಮಿ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ ಶ್ರೀ ರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿರಿಸಿ, ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಸ್ತಬ್ಧಚಿತ್ರಗಳೊಂದಿಗೆ ಪಟ್ಟಣದಲ್ಲಿ ಶೋಭಾಯಾತ್ರೆ ನಡೆಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ತಿಳಿಸಿದ್ದಾರೆ.
ಶೋಭಾಯಾತ್ರೆಯಲ್ಲಿ ಆಂಜನೇಯ ದೇವಾಲಯ ಸಮಿತಿ, ಸೋಮವಾರಪೇಟೆ ನಗರ, ಆಲೇಕಟ್ಟೆ ರಸ್ತೆ, ಗೌಡ ಸಮಾಜ ರಸ್ತೆ, ಚೌಡ್ಲು, ಬಜೆಗುಂಡಿ, ಕಾನ್ವೆಂಟ್ಬಾಣೆ, ಹಾನಗಲ್ಲು, ಯಡೂರು, ಶಾಂತಳ್ಳಿ, ಕಲ್ಕಂದೂರು ಗ್ರಾಮಗಳಿಂದ ಸ್ತಬ್ಧಚಿತ್ರಗಳು ಆಗಮಿಸಲಿದ್ದು, ದೇವಾಲಯದಲ್ಲಿ ಸಮಾಪನಗೊಂಡು ನಂತರ ಪಟ್ಟಣದಲ್ಲಿ ಶೋಭಾಯಾತ್ರೆ ತೆರಳಲಿವೆ. ಮೆರವಣಿಗೆಯಲ್ಲಿ ಹುಲಿವೇಷ ಕುಣಿತ, ನಾಸಿಕ್ ಬ್ಯಾಂಡ್ ಸೇರಿದಂತೆ ಇನ್ನಿತರ ಕಲಾತಂಡಗಳು ಭಾಗವಹಿಸಲಿವೆ ಎಂದು ಉತ್ಸವ ಸಮಿತಿ ಕಾರ್ಯದರ್ಶಿ ಎಂ.ಬಿ. ಉಮೇಶ್ ತಿಳಿಸಿದ್ದಾರೆ.