ಸೋಮವಾರಪೇಟೆ, ಏ. ೭: ಇಲ್ಲಿನ ವಿಎಸ್ಎಸ್ಎನ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ನೂತನವಾಗಿ ನವೀಕರಣಗೊಂಡಿರುವ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ತಾಲೂಕು ಕಚೇರಿ ಕಟ್ಟಡವನ್ನು ಇದೀಗ ನವೀಕರಣ ಮಾಡಲಾಗಿದ್ದು, ಕಟ್ಟಡದ ಉದ್ಘಾಟನೆಯೂ ನೆರವೇರಿದೆ. ಈ ಹಿಂದೆ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೊಂದಣಾಧಿಕಾರಿಗಳ ಕಚೇರಿಯನ್ನು ವಿಎಸ್ಎಸ್ಎನ್ ಕಟ್ಟಡಕ್ಕೆ ಮಾಸಿಕ ಬಾಡಿಗೆ ಆಧಾರದ ಮೇಲೆ ಸ್ಥಳಾಂತರಿಸಲಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಸೋರುತ್ತಿದ್ದ ಕಟ್ಟಡವನ್ನು ಇದೀಗ ದುರಸ್ತಿಪಡಿಸ ಲಾಗಿದ್ದು, ತಕ್ಷಣ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸ ಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರಿ ಇಲಾಖೆಯ ಎಲ್ಲಾ ಕಚೇರಿಗಳೂ ಒಂದೇ ಸೂರಿನಡಿ ಇದ್ದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಡತಗಳ ರಕ್ಷಣೆಯ ಕಾರಣದಿಂದ ಈ ಹಿಂದೆ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ತಾಲೂಕು ಕಚೇರಿಯನ್ನು ರೂ. ೧.೪೦ ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ನೋಂದಣಾಧಿಕಾರಿಗಳ ಕಚೇರಿಯನ್ನು ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಿಸುವAತೆ ಸ್ವತಃ ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ನೀಡಿದ್ದರೂ ಈವರೆಗೆ ಸ್ಥಳಾಂತರ ಪ್ರಕ್ರಿಯೆ ನಡೆದಿಲ್ಲ ಎಂದು ಮುದ್ದಪ್ಪ ತಿಳಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಬಳಿ ಪ್ರತಿಕ್ರಿಯೆ ಬಯಸಿದ ಸಂದರ್ಭ ಮಾಹಿತಿ ನೀಡಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ಸೋಮವಾಪೇಟೆ ಉಪ ನೋಂದಣಾಧಿಕಾರಿ ಕಚೇರಿಯನ್ನು ತಾಲೂಕು ಕಚೇರಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಎಲ್ಲಾ ರೀತಿಯ ಕ್ರಮವನ್ನು ವಹಿಸಲಾಗಿದೆ. ಅಧಿಕಾರಿಗಳು ತಿಳಿಸಿದಂತೆ ೩೦೦೦ಕ್ಕೂ ಅಧಿಕ ಚದರ ಅಡಿ ಹೊಂದಿರುವ ಕೊಠಡಿಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಮೀಸಲಿರಿಸಲಾಗಿದೆ. ಅಧಿಕಾರಿಯೇ ಆಯ್ಕೆ ಮಾಡಿ ಕೊಂಡಿರುವ ಎರಡು ಕೊಠಡಿಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಉಪ ನೋಂದಣಾಧಿಕಾರಿಗಳು ಪತ್ರ ಬರೆದಿದ್ದು, ನೆಲ ಅಂತಸ್ತಿನಲ್ಲಿ ಕೊಠಡಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಪ್ರಸ್ತುತ ಸಹಕಾರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಯು ಮೊದಲನೇ ಅಂತಸ್ತಿನಲ್ಲಿಯೇ ಇದೆ. ಅದರ ಭಾವಚಿತ್ರ ಸಹಿತ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದೇವೆ. ತಾಲೂಕು ಕಚೇರಿಯ ನೆಲ ಅಂತಸ್ತಿನಲ್ಲಿ ಉಪ ಖಜಾನಾಧಿ ಕಾರಿಗಳ ಕಚೇರಿ, ಆರ್ಟಿಸಿ, ಕಿಯೋಸ್ಕ್, ಆಮದು ಮತ್ತು ರವಾನೆ, ಚುನಾವಣಾ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಉಪ ನೋಂದಣಾಧಿಕಾರಿಗಳೇ ಕೊಠಡಿಗಳ ಬಗ್ಗೆ ಒಪ್ಪಿಗೆ ಸೂಚಿಸಿದ್ದರು. ಇದೀಗ ಬೇರೆ ಕೊಠಡಿಗಳನ್ನು ಕೋರುತ್ತಿದ್ದು, ಈ ಬಗ್ಗೆ ತಾವುಗಳೇ ನಿರ್ದೇಶನ ನೀಡಬೇಕೆಂದು ತಾಲೂಕು ತಹಶೀಲ್ದಾರ್ ಕಚೇರಿಯಿಂದ ಜಿಲ್ಲಾಧಿ ಕಾರಿಗಳಿಗೆ ಪತ್ರ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದ ರಾಜು ಮಾಹಿತಿ ನೀಡಿದ್ದಾರೆ. ಕಚೇರಿ ಸ್ಥಳಾಂತರದ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್ವರ್ ಅವರು ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರದ ಬಗ್ಗೆ ಈಗಾಗಲೇ ಕಮಿಷನರ್ಗೆ ಪತ್ರ ಬರೆಯಲಾಗಿದೆ. ಕೇಂದ್ರ ಕಚೇರಿಯಿಂದ ಕೆಎಸ್ಡಬ್ಲೂö್ಯಎಎನ್ ಸ್ಥಳಾಂತರಕ್ಕೆ ಅನುಮತಿ ಬಂದ ತಕ್ಷಣ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.