ಮಡಿಕೇರಿ, ಏ. ೬: ಕಣ್ಣಂಗಾಲ ಗ್ರಾಮದ ಚಾಮುಂಡಿ ಪೈಸಾರಿಯ ಸಮುದಾಯ ಭವನದಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವ ಮತ್ತು ಮಹಿಳಾ ಗ್ರಾಮ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್.ಆರ್.ಎಲ್.ಎಂ. ಜಿಲ್ಲಾ ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ ಮಹಿಳೆಯರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತವಾಗದೇ ಹೊರಜಗತ್ತಿನ ಜವಾಬ್ದಾರಿ ಹೊರುವಲ್ಲಿ ಸಬಲರಾಗಿದ್ದಾರೆ. ಮಹಿಳೆಯರಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ; ಆಧುನಿಕತೆಯ ಇಂದಿನ ದಿನಗಳಲ್ಲಿ ಸ್ತಿçà ಸಂಘಟನೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿದೆ. ಸರ್ಕಾರದ ಯೋಜನೆಗಳಲ್ಲಿ ಮಹಿಳೆಯರಿಗೆ ವಿಶೇಷಪಾಲು ನೀಡಲಾಗುತ್ತಿದೆ ಮಹಿಳೆಯರು ಕೂಡ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತ್ತಷ್ಟು ಪ್ರಗತಿ ಸಾಧಿಸಬೇಕೆಂದು ಹೇಳಿದರು.

ಈ ಸಂದರ್ಭ ಮಹಿಳಾ ದಿನಾಚರಣೆಯ ಅಂಗವಾಗಿ ಒಕ್ಕೂಟದ ಸದಸ್ಯರಿಗೆ ಹಗ್ಗಜಗ್ಗಾಟ, ಮ್ಯೂಸಿಕ್ ಚೇರ್, ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ, ವಿಷದ ಚೆಂಡು, ಬಾಟಲಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬಗೆಯ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ಬಳಿಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮಹಿಳೆಯರು ಸಂಘಟಿತರಾಗಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೇಮಾವತಿ, ಕಿರಿಯ ಆರೋಗ್ಯ ಸಹಾಯಕಿ ವಿಮಲ, ಆಶಾ, ಕಾರ್ಯಕರ್ತೆಯರಾದ ಕವಿತಾ, ಗೀತಾ, ಸುಗುಣ ಹಾಗೂ ಹಂದಿ ಸಾಕಣೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಸುಚಿತ್ರ. ವಿ.ಎಸ್. ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಜತೆಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಜಿಲ್ಲಾ ಯೋಜನಾ ವ್ಯವಸ್ಥಾಪಕ ಕುಮಾರ್, ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್, ತಾಲೂಕು ವಲಯ ಮೇಲ್ವಿಚಾರಕ ಸೋಮಶೇಖರ್, ಪಿಡಿಓ ಧರಣಿ, ಎಲ್.ಸಿ.ಆರ್.ಪಿ. ಪಾರ್ವತಿ, ಸಮುದಾಯ ಲೆಕ್ಕ ಪರಿಶೋಧಕರಾದ ನೌಶೀನ, ಭವಾನಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳ ಸದಸ್ಯರುಗಳು ಕ್ರೀಡಾಕೂಟ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಕ್ಕೂಟದ ವಾರ್ಷಿಕ ವರದಿಯನ್ನು ರೇಖಾ ಬಿ.ಎಸ್. ಮಂಡಿಸಿದರು. ಸುಜಾತ ನಿರೂಪಿಸಿ, ರಾಧಾ ಸ್ವಾಗತಿಸಿದರೆ, ಸವಿತಾ ವಂದಿಸಿದರು.