ಸೋಮವಾರಪೇಟೆ, ಏ. ೫: ತಾಲೂಕಿನ ಶನಿವಾರಸಂತೆ ಪಟ್ಟಣ ವ್ಯಾಪ್ತಿಯಲ್ಲಿರುವ ತ್ಯಾಗರಾಜ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಪುಂಡರ ಆಟಾಟೋಪಕ್ಕೆ ಗುರಿಯಾಗಿದ್ದು, ವಿದ್ಯಾ ದೇಗುಲವೀಗ ಮದ್ಯ, ಸಿಗರೇಟ್, ಗುಟ್ಕಾದ ಅಡ್ಡೆಯಾಗಿದೆ.
ಪುಂಡರ ಉಪಟಳದ ಬಗ್ಗೆ ಸ್ವತಃ ಶಾಲಾ ಮುಖ್ಯೋಪಾಧ್ಯಾಯರೇ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಮದ್ಯವ್ಯಸನಿಗಳಿಗೆ ಕಡಿವಾಣ ಬಿದ್ದಿಲ್ಲ ಎಂದು ಸ್ಥಳೀಯ ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಶಾಲೆಯ ತರಗತಿಗಳು ಮುಕ್ತಾಯಗೊಂಡು ಬೀಗ ಹಾಕಿ ಶಿಕ್ಷಕರು ಹೊರಬರುತ್ತಿದ್ದಂತೆ ಶಾಲಾ ವಠಾರ ಪ್ರವೇಶಿಸುವ ಸ್ಥಳೀಯ ಕೆಲ ‘ಅವಿದ್ಯಾವಂತ’ರು ಶಾಲೆಯ ಆವರಣದಲ್ಲಿಯೇ ಮದ್ಯ ಸೇವಿಸಿ ಬಾಟಲ್ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ.
ಇದರೊಂದಿಗೆ ಸಿಗರೇಟ್ ಸೇದಿ ತುಂಡುಗಳನ್ನು ಅಲ್ಲಲ್ಲಿ ಹಾಕುತ್ತಿದ್ದು, ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗಿಯುತ್ತಿದ್ದಾರೆ. ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ವಿದ್ಯಾದೇಗುಲವನ್ನು ಇಂತಹ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಅನಾಗರಿಕರಿಗೆ ಪೊಲೀಸರೇ ತಕ್ಕ ‘ಪಾಠ’ ಕಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲಾ ಆವರಣದಲ್ಲಿ ಇಂತಹ ಕುಚೇಷ್ಟೆಗಳನ್ನು ಮಾಡದಂತೆ ಕೆಲವರು ಬುದ್ಧವಾದ ಹೇಳಿದರೂ ಸೊಪ್ಪುಹಾಕದೇ ಉಡಾಫೆಯ ವರ್ತನೆ ತೋರುತ್ತಿದ್ದಾರೆ. ಸಂಜೆ ೬ ರಿಂದ ೮ ಗಂಟೆಯವರೆಗೆ ಪುಂಡರ ಹಾವಳಿ ನಡೆಯುತ್ತಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಶಾಲಾ ವ್ಯಾಪ್ತಿಯಲ್ಲಿ ಬೀಟ್ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.