ಗೋಣಿಕೊಪ್ಪ ವರದಿ, ಏ. ೫: ಉತ್ತರಾಖಂಡದಲ್ಲಿ ತಾ. ೧೧ ರಂದು ಐಎಎಸ್ ಅಧಿಕಾರಿಗಳಿಗೆ ಆಯೋಜಿಸಿರುವ ಕಿಸಾನ್ ಸಂವಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದಿಂದ ಕೊಡಗು ಜಿಲ್ಲೆಯ ಪ್ರಗತಿಪರ ರೈತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಆಯ್ಕೆಯಾಗಿದ್ದಾರೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ತಿಳಿಸಿದ್ದಾರೆ.
ಕೃಷಿ ವಿಚಾರದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಸಾಧಕ-ಬಾಧಕ ವಿಚಾರಗಳನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಲಾಗುವುದು. ಸುಮಾರು ೧೮೩ ಅಧಿಕಾರಿಗಳು ತರಬೇತಿ ಕೇಂದ್ರದಲ್ಲಿದ್ದು, ಇದರಿಂದ ಜನ ಸೇವೆಗೆ ತೊಡಗಿಕೊಳ್ಳುವ ಅಧಿಕಾರಿಗಳಿಗೆ ಕೃಷಿಯಲ್ಲಿನ ಮೂಲ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಗತಿಪರ ರೈತ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ವಿಜ್ಞಾನಿಗಳ ಸಲಹೆ ಪಡೆದು ಸಾಕಷ್ಟು ಕೃಷಿಯಲ್ಲಿ ಪ್ರಯೋಗ ನಡೆಸಲು ಸಹಕಾರಿಯಾಯಿತು. ಇಂತಹ ಒಂದು ಅವಕಾಶಕ್ಕೆ ವಿಜ್ಞಾನಿಗಳ ಪ್ರೋತ್ಸಾಹ ಪ್ರಯೋಜನಕ್ಕೆ ಬಂದಿದೆ. ಶ್ರಮ ಇದೆ. ಕೆವಿಕೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕೃಷಿ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಸೇರಿದಂತೆ ವಿಜ್ಞಾನಿಗಳ ವೃಂದ ಹೆಚ್ಚು ಸಲಹೆ ನೀಡಿ ಸಮಗ್ರ ಕೃಷಿಕನಾಗಿ ಪ್ರೋತ್ಸಾಹಿಸಿದೆ. ಉತ್ತಮ ಸಲಹೆ ಅಧಿಕಾರಿಗಳಿಗೆ ನೀಡಲಾಗುವುದು ಎಂದರು.