ವೀರಾಜಪೇಟೆ, ಏ. ೬: ವೀರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ದೇವಳದಲ್ಲಿ ೧೦೧ ತೆರೆಗಳು ಸಂಜೆ ವೈಭವೋಪೇತವಾಗಿ ಕೊನೆ ಗೊಂಡಿತು. ಇಲ್ಲಿ ವಿಶೇಷವಾಗಿ ನಡೆಯುವ ತೆರೆಗಳ ದರ್ಶನಕ್ಕಾಗಿ ಗ್ರಾಮಸ್ಥರಲ್ಲದೆ ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಇಲ್ಲಿನ ಹಸಿರು ಬನದಲ್ಲಿ ಸ್ಥಿತಗೊಂಡಿರುವ ದೇವಿಯು ತುಳುನಾಡಿನ ಕಾಡು ದೇವತೆಗಳಾದ ಚಾಮುಂಡಿ ಮತ್ತು ಕೊರತಿ ದೇವಿಯ ೧೦೧ ತೆರೆಗಳನ್ನು ದೇವಳ ಬನದ ಅನತಿ ದೂರದಲ್ಲಿರುವ ಅರಮನೆ ಪಾಲೆ ಜನಾಂಗದವರು ೫೦೦ ವರ್ಷಗಳಿಂದ ತೆರೆಗಳನ್ನು ಕಟ್ಟುತ್ತಾ ತಮ್ಮ ಜೀವನವನ್ನು ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ದೈವಿಕ ನೆಲೆಯಿರುವ ಸ್ಥಳದಲ್ಲಿ ಶುದ್ಧವಾಗಿ ಬಂದು ಪ್ರಾರ್ಥಿಸಿದರೆ ಭಕ್ತರ ಕೋರಿಕೆಗೆ ಶೀಘ್ರದಲ್ಲಿ ಪರಿಹಾರ ದೊರಕುತ್ತದೆ ಎಂಬ ಪ್ರತೀತಿ ಕೂಡ ಇದೆ. ತೆರೆ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಸದಸ್ಯರುಗಳು ಸೇರಿದಂತೆ ಗ್ರಾಮದ ಪ್ರಮುಖರು ಉತ್ಸವದಲ್ಲಿ ಭಾಗಿಗಳಾಗಿದ್ದರು.