ಸಿದ್ದಾಪುರ, ಏ. ೬: ಸಂಜೀವಿನಿ ಮಹಿಳಾ ಒಕ್ಕೂಟ ವಾರ್ಷಿಕ ಸಭೆ ಹಾಗೂ ಮಹಿಳಾ ಗ್ರಾಮ ಸಭೆಯು ಸಿದ್ದಾಪುರದ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ ಮೋಹನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು, ಸ್ವಯಂ ಉದ್ಯೋಗದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರಬೇಕು. ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಜೀವಿನಿ ಒಕ್ಕೂಟದ ವಲಯ ಅಧಿಕಾರಿ ಸೋಮಶೇಖರ್ ಮಹಿಳೆಯರಿಗೆ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ತಯಾರಿಸಿದ ವಿವಿಧ ಆಹಾರ ಪದಾರ್ಥಗಳು ಇನ್ನಿತರ ವಸ್ತುಗಳನ್ನು ಪಂಚಾಯಿತಿ ಆವರಣದಲ್ಲಿ ಮಾರಾಟ ಮಾಡಿದರು. ಮಹಿಳೆಯರಿಗೆ ವಿವಿಧ ಆಟೋಟಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ರಿಯಾ ಯೋಜನೆ ಬಜೆಟ್ಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನಿಸಿ ಕಿರುಕಾಣಿಕೆ ನೀಡಲಾಯಿತು. ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಎಂ.ಎ. ಯಮುನಾ ಸ್ವಾಗತಿಸಿ ವಂದಿಸಿದರು. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.