ಮಡಿಕೇರಿ, ಏ. ೫: ಕೊಡಗು ಕಾಪಾಳ ಜನಾಂಗವು ಆರ್ಥಿಕವಾಗಿ ತೀರಾ ಹಿಂದುಳಿದಿರುವುದನ್ನು ಗಮನಿಸಲಾಗಿದೆ. ಜನಾಂಗದ ಮಕ್ಕಳು ಶಿಕ್ಷಣದಲ್ಲಿಯೂ ಹಿಂದುಳಿದ್ದಾರೆ. ಈ ಸಮುದಾಯದ ಮಂದಿ ಹಿಂದುಳಿದ ವರ್ಗ ಕೆಟಗೆರಿ-೧ರಲ್ಲಿದ್ದಾರೆ. ಇದನ್ನು ಪರಿಶಿಷ್ಟ ವರ್ಗ (ಎಸ್‌ಟಿ)ಕ್ಕೆ ಸೇರ್ಪಡೆ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭರವಸೆಯಿತ್ತರು.

ಅವರು ಇಂದು ಯವಕಪಾಡಿ ಯಲ್ಲಿ ಕಾಪಾಳ ಜನಾಂಗದ ಸ್ಥಿತಿಗತಿ ಗಮನಿಸಿ ಅವರೊಂದಿಗೆ ಬೆರೆತು ಚರ್ಚಿಸಿ ಬಳಿಕ ಕಿರು ಸಮಾರಂಭ ವೊಂದರಲ್ಲಿ ಮಾತನಾಡುತ್ತಿದ್ದರು.

ಕೆ.ಜಯಪ್ರಕಾಶ ಹೆಗ್ಡೆ ಅವರೊಂದಿಗೆ ಆಯೋಗದ ಎಚ್.ಎಸ್. ಕಲ್ಯಾಣ್ ಕುಮಾರ್, ಬಿ.ಎಸ್. ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್, ಶಾರದ ನಾಯ್ಕ, ಇತರರು ಕೊಡಗು ಜಿಲ್ಲೆಯ ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕಾಪಾಳ ಸಮಾಜದವರ ಸ್ಥಿತಿಗತಿ ಆಲಿಸಿದರು.

ಆರಂಭದಲ್ಲಿ ಮಾತನಾಡಿದ ಕಾಪಾಳ ಸಮಾಜದ ಪ್ರಮುಖರಾದ ಕಾಪಾಳರ ತಮ್ಮಯ್ಯ ಅವರು ನಾಲ್ಕುನಾಡು ಅರಮನೆ ವ್ಯಾಪ್ತಿಯಲ್ಲಿ ೩೨ ಮನೆಗಳಿದ್ದು, ಸುಮಾರು ೨೦೦ ಕ್ಕಿಂತ ಕಡಿಮೆ ಜನಸಂಖ್ಯೆ ಇದ್ದಾರೆ. ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಕಾಪಾಳ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ತಿಳಿಸಿದರು.

ದಟ್ಟ ಕಾನನದಲ್ಲಿ ವಾಸಿಸುತ್ತಿದ್ದ ಕಾಪಾಳ ಜನಾಂಗದವರನ್ನು ಅಂದಿನ ರಾಜರು ನಾಲ್ಕುನಾಡು ಅರಮನೆ ‘ಕಾವಲು ಕಾಯಲು’ ಕರೆದುಕೊಂಡು ಬಂದರು. ಕಾಪಾಳರು ಎಂದರೆ ಕಾವಲುಗಾರರು, ಕಾಪಾಡುವವರು, ರಕ್ಷಕರು ಎಂಬ ಅರ್ಥವಿದೆ ಎಂದು ಕಾಪಾಳರ ತಮ್ಮಯ್ಯ ತಿಳಿಸಿದರು.

ಅಂದಿನ ರಾಜರು ಕಾಪಾಳ ಸಮಾಜದವರಿಗೆ ಸ್ವಲ್ಪ ಜಾಗ ನೀಡಿ ನಾಲ್ಕುನಾಡು ಅರಮನೆ ಕಾವಲುಗಾರರನ್ನಾಗಿ ನೇಮಿಸಿ ಕೊಂಡಿದ್ದರು. ಕಾಪಾಳ ಸಮಾಜವು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ ವಾಗಿ ತುಂಬಾ ಹಿಂದೆ ಉಳಿದಿದ್ದು, ಕಾಪಾಳ ಜನಾಂಗಕ್ಕೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ,

(ಮೊದಲ ಪುಟದಿಂದ) ಆದ್ದರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕೋರಿದರು.

ಈ ಸಂದರ್ಭ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರು ಕಾಪಾಳ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವರು ಮತ್ತು ಸರ್ಕಾರಿ ಉದ್ಯೋಗ ಪಡೆದಿರುವವರು ಎಷ್ಟು ಮಂದಿ ಎಂದು ಮಾಹಿತಿ ಪಡೆದರು.

ಒಂದಿಬ್ಬರು ಮಾತ್ರ ಪದವಿ ಹಂತಕ್ಕೆ ಓದಿದ್ದಾರೆ. ಅದು ಬಿಟ್ಟು ಯಾರೂ ಸಹ ಸರ್ಕಾರಿ ಉದ್ಯೋಗವನ್ನು ಪಡೆದಿಲ್ಲ ಎಂದು ಕಾಪಾಳರ ಪ್ರಮುಖರೊಬ್ಬರು ಮಾಹಿತಿ ನೀಡಿದರು.

ಕಾಪಾಳರು ಕೊಡಗಿನ ಮೂಲ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಕೊಡವ ಸಂಸ್ಕೃತಿ, ಸಂಪ್ರದಾಯ ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಕುಡಿಯರ ಭರತ್‌ಚಂದ್ರ ದೇವಯ್ಯ ಮತ್ತು ಕಾಪಾಳ ಜನಾಂಗದ ಪ್ರಮುಖ ಪೊನ್ನಪ್ಪ ಮಾತನಾಡಿ ಕಾಪಾಳ ಸಮುದಾಯದ ಬಗ್ಗೆ ಕುಲಶಾಸ್ತç ಅಧ್ಯಯನ ಆಗಬೇಕು. ತಾತ ಮುತ್ತಾತಂದಿರ ಹೆಸರಿನಲ್ಲಿ ಭೂಮಿ ಇದೆ. ಆದರೆ ಮಕ್ಕಳ ಹೆಸರಿಗೆ ಆರ್‌ಟಿಸಿ ಆಗಿಲ್ಲ ಎಂದು ಅವರು ತಿಳಿಸಿದರು. ಪಂಚಾಯಿತಿ ವತಿಯಿಂದ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಅವರು ಕೋರಿದರು.

ಮಾಹಿತಿ ಆಲಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರು ತಾ. ೬ರಂದು (ಇಂದು) ಜಿಲ್ಲಾಧಿಕಾರಿ ಅವರ ಜೊತೆ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕಾಪಾಳರ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಜಾತಿ ವರ್ಗೀಕರಣ ಪಟ್ಟಿಯಲ್ಲಿ ಕೆಟಗರಿ-೦೧ ರ ಕ್ರಮ ಸಂಖ್ಯೆ ೨೬ ರಲ್ಲಿ ‘ಕೊಡಗು ಕಾಪಾಳ’ ಎಂದು ಇದೆ. ತಮ್ಮ ಜೀವನ ಶೈಲಿಯನ್ನು ಗಮನಿಸಿದಾಗ ಬುಡಕಟ್ಟು ಸಂಸ್ಕೃತಿ, ಸಂಪ್ರದಾಯ ಹೊಂದಿದ್ದು, ಆ ನಿಟ್ಟಿನಲ್ಲಿ ವರದಿ ತಯಾರಿಸಿ ಪರಿಶಿಷ್ಟ ಪಂಗಡ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೆಟಗರಿ-೦೧ ರಲ್ಲಿ ಇದ್ದರೂ ಸಹ ಅಲೆಮಾರಿ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳು ಸಿಗಲಿದ್ದು, ಹೆಚ್ಚಿನ ಸೌಲಭ್ಯ ಪಡೆಯುವಂತಾಗಲು ಸಹಕಾರಿಯಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಬುಧವಾರ ನಡೆಯುವ ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಹೇಳಿದರು.

ಪ್ರತಿಯೊಬ್ಬರೂ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ ಎಂದರು.

ಬಡತನದಲ್ಲಿದ್ದರೂ ಸಹ ತಾವು ವಾಸಿಸುತ್ತಿರುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಿರುವುದಕ್ಕೆ ಕೆ. ಜಯಪ್ರಕಾಶ ಹೆಗ್ಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕು

‘ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಮಾಜಗಳು ವಾಸಿಸುವ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆಯಲಾಗುತ್ತಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂಬುದು ಹಿಂದುಳಿದ ವರ್ಗಗಳ ಆಯೋಗದ ಆಶಯವಾಗಿದೆ. ಆ ನಿಟ್ಟಿನಲ್ಲಿ ತಮ್ಮ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸಲಾಗುವುದು ಎಂದು ಅವರು ನುಡಿದರು.’

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕಾಪಾಳ ಸಮಾಜ ಬಿಟ್ಟು ಹೋಗಿದೆ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನಗರಸಭೆ ಅಧ್ಯಕ್ಷರು ಗಮನ ಸೆಳೆದಿದ್ದರು. ಆ ನಿಟ್ಟಿನಲ್ಲಿ ಕಾಪಾಳ ಜನಾಂಗ ವಾಸಿಸುವ ಪ್ರದೇಶವನ್ನು ವೀಕ್ಷಿಸಿ, ಇಲ್ಲಿನ ಕಾಪಾಳ ಜನರ ಸ್ಥಿತಿಗತಿ ಗಮನಿಸಲಾಗಿದೆ ಎಂದರು.

ಕಕ್ಕಬ್ಬೆ ಗ್ರಾ.ಪಂ. ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎನ್. ಮಂಜುನಾಥ್, ತಾಲೂಕು ಅಧಿಕಾರಿ ರಾಜಶೇಖರ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕಿ ಕವಿತಾ ಹಾಗೂ ಇತರರು ಇದ್ದರು.

ಕಾಪಾಳರ ಸ್ಥಿತಿಗತಿ ಆಲಿಸುವ ಸಂದರ್ಭದಲ್ಲಿ ಕಾಪಾಳ ಸಮಾಜದ ಪ್ರಮುಖರು ದುಡಿ ನುಡಿಸಿದರು. ಮಹಿಳೆಯರು ನೃತ್ಯ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾಪಾಳರ ಪ್ರಕಾಶ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಕಾಪಾಳರ ಹಿರಿಯರೊಂದಿಗೆ ಮಾತುಕತೆ ನಡೆಸಿದರು. ಕಾಪಾಳರು ವಾಸಿಸುವ ಸ್ಥಳದಿಂದ ನಾಲ್ಕುನಾಡು ಅರಮನೆಗೆ ನಡೆದುಕೊಂಡು ಹೋಗಿ ಅರಮನೆ ವೀಕ್ಷಿಸಿದರು. ಅದಕ್ಕೂ ಮೊದಲು ಯವಕಪಾಡಿ ಶಾಲಾ ವಿದ್ಯಾರ್ಥಿ ಗಳೊಂದಿಗೆ ಮಾತನಾಡಿದರು.