ಸೋಮವಾರಪೇಟೆ,ಏ.೫: ಆಕಸ್ಮಿಕವಾಗಿ ಬೆಂಕಿಬಿದ್ದ ಪರಿಣಾಮ ಏಲಕ್ಕಿ, ಕಾಫಿ ತೋಟ ಹಾಗೂ ಜೇನು ಪೆಟ್ಟಿಗೆಗೆ ಹಾನಿಯಾಗಿದ್ದು, ನಷ್ಟಕ್ಕೊಳಗಾದ ಕೃಷಿಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತಾಲೂಕಿನ ಕಿಕ್ಕರಳ್ಳಿ ಗ್ರಾಮದ ಕಾಡಿಗೆ ಬಿಂಕಿ ಬಿದ್ದು ಸಮೀಪದಲ್ಲೇ ಇರುವ ಕಾಫಿ ತೋಟಕ್ಕೆ ಆವರಿಸಿದ ಪರಿಣಾಮ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬವರಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಇದರೊಂದಿಗೆ ಮನೆಗೂ ಹಾನಿಯಾಗಿದ್ದು, ಪೈಪ್ಗಳು, ಜೇನುಪೆಟ್ಟಿಗೆಗಳು, ಕಾಫಿ, ಏಲಕ್ಕಿ ಗಿಡಗಳಿಗೆ ಬೆಂಕಿ ತಗುಲಿ ನಷ್ಟವಾಗಿದೆ.
ಕಾಫಿ ಗಿಡಿಗಳಿಗೆ ೧೫ ವರ್ಷವಾಗಿತ್ತು. ಉತ್ತಮ ಫಸಲು ಕೊಯ್ಲು ಮಾಡುವ ಸಂದರ್ಭದಲ್ಲಿ ನಷ್ಟವಾಗಿದೆ. ಈ ಭಾಗದಲ್ಲಿ ಅತಿ ಹೆಚ್ಚು ಮಳೆಬೀಳುತ್ತಿದ್ದು, ಕೃಷಿ ಮಾಡುವುದೇ ಕಷ್ಟಕರವಾಗಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತಿದೆ. ಮಳೆಗಾಲದಲ್ಲಿ ರೋಗಬಾಧೆಯಿಂದ ಕಾಫಿ, ಏಲಕ್ಕಿಯನ್ನು ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ಈ ಮಧ್ಯೆ ಬೆಂಕಿ ಬಿದ್ದು ಎಲ್ಲವೂ ನಾಶವಾಗಿದೆ ಎಂದು ಅನಿಲ್ ಅವರು ಅಳಲು ತೋಡಿಕೊಂಡಿದ್ದಾರೆ.
ಪರಿಹಾರಕ್ಕಾಗಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ, ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಾರಿ ತೋಚದಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕನಿಷ್ಟ ಮಾನವೀಯತೆ ತೋರಿ ಪರಿಹಾರ ಒದಗಿಸಿದರೆ ಬದುಕಿಕೊಳ್ಳಬಹುದು ಎಂದು ತಮ್ಮ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.