ಸೋಮವಾರಪೇಟೆ,ಏ.೪: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ನಿಮಿಷಕ್ಕೆ ೩೯೦ ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರುವ ಬೃಹತ್ ಆಮ್ಲಜನಕ ಉತ್ಪಾದನಾ ಘಟಕವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಿದರು.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮೂಲಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ. ೧.೧೦ ಕೋಟಿ ವೆಚ್ಚದಲ್ಲಿ ನೂತನ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿದ್ದು, ‘ಆನ್‌ಸೈಡ್ ಆಕ್ಸಿಜನ್ ಜನರೇಟ್ ಯೂನಿಟ್’ನ ಯಂತ್ರೋಪಕರಣಗಳನ್ನು ಅಳವಡಿಸಿ, ರೋಗಿಗಳ ಸೇವೆಗೆ ಸಿದ್ಧಗೊಳಿಸಲಾಗಿದೆ. ಒಂದೇ ಸಮಯದಲ್ಲಿ ೪೦ ರೋಗಿಗಳಿಗೆ ಆಮ್ಲಜನಕ ನೀಡಬಹುದಾಗಿದೆ ಎಂದು ಶಾಸಕ ರಂಜನ್ ತಿಳಿಸಿದರು.

೧.೩೫ ಕೋಟಿ ವೆಚ್ಚದಲ್ಲಿ ೨೨ ಬೆಡ್ ಸಾಮರ್ಥ್ಯದ ತೀವ್ರ ನಿಗಾ ಘಟಕ ಸ್ಥಾಪಿಸಲಾಗುತ್ತಿದೆ. ರೋಗಿಗಳು ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ಪಡೆಯಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಒದಗಿಸಲಾಗಿದ್ದು, ರೋಗಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕೊರೊನಾ ಎರಡನೇ ಅಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿದ್ದು, ಆಕ್ಸಿಜನ್ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ‘ಪ್ರಾಜೆಕ್ಟ್ ಒ೨’ ಯೋಜನೆಗೆ ಚಾಲನೆ ನೀಡಿರುವುದರಿಂದ, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಆಮ್ಲಜನಕ ಉತ್ಪಾದನಾ ವಲಯಕ್ಕೆ ವಿಶೇಷ ಆದ್ಯತೆಯನ್ನು ನೀಡಿದ ಪರಿಣಾಮ ಸೋಮವಾರಪೇಟೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿದೆ.

ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ಆಕ್ಸಿಜನ್ ಬೇಕಾಗುವಂತಹ ತುರ್ತು ಸಂದರ್ಭದಲ್ಲಿ ಮಡಿಕೇರಿ, ಮೈಸೂರು, ಹಾಸನಕ್ಕೆ ತೆರಳಬೇಕಾಗಿತ್ತು. ಇದೀಗ ಸ್ಥಳೀಯವಾಗಿಯೇ ಆಕ್ಸಿಜನ್ ಸಹಿತ ಬೆಡ್‌ಗಳ ವ್ಯವಸ್ಥೆಯಾಗುತ್ತಿದ್ದು, ರೋಗಿಗಳ ಪಾಲಿಗೆ ಹೆಚ್ಚಿನ ಉಪಯೋಗವಾಗಲಿದೆ.

ನೂತನ ಘಟಕ ಉದ್ಘಾಟನೆ ಸಂದರ್ಭ ಆಸ್ಪತ್ರೆಯ ವೈದ್ಯರುಗಳಾದ ಶಿವಪ್ರಸಾದ್, ಸತೀಶ್‌ಕುಮಾರ್, ನವೀನ್, ಪ್ರಮುಖರಾದ ಎಸ್.ಆರ್. ಸೋಮೇಶ್, ಕಿಬ್ಬೆಟ್ಟ ಮಧು, ಕೆ.ಕೆ. ಸುಧಾಕರ್, ಟಿ.ಕೆ. ರಮೇಶ್, ಮಾಲಂಬಿ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.