ಸೋಮವಾರಪೇಟೆ,ಏ.೪: ಸಮೀಪದ ಗೌಡಳ್ಳಿ ಗ್ರಾಮದ ಹಿಂದೂ ಗೆಳೆಯರ ಬಳಗದ ವತಿಯಿಂದ ಬಿ.ಜಿ.ಎಸ್.ಶಾಲಾ ಮೈದಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆದ ನಾಲ್ಕನೇ ವರ್ಷದ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ಅತ್ಯಾಕರ್ಷಕ ಆಟ ಪ್ರದರ್ಶಿಸಿದ ಬೆಂಗಳೂರಿನ ಮಲ್ನಾಡ್ ಯೂತ್ ಕ್ಲಬ್ ತಂಡ ಪ್ರಥಮ ಸ್ಥಾನಕ್ಕೆ ಭಾಜನವಾಗಿದ್ದು, ರೂ. ೧ಲಕ್ಷ ನಗದಿನೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.

ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಮಲ್ನಾಡ್ ತಂಡದ ವಿರುದ್ಧ ಸೋಲನುಭವಿಸಿದ ಮೈಸೂರು ವಿಜಯನಗರ ಫುಟ್ಬಾಲ್ ಕ್ಲಬ್ ತಂಡವು ಟ್ರೋಫಿಯೊಂದಿಗೆ ರೂ. ೫೦ ಸಾವಿರ ನಗದು ಬಹುಮಾನಕ್ಕೆ ಭಾಜನವಾಯಿತು.

ಮೊದಲ ಸೆಮಿ ಫೈನಲ್‌ನಲ್ಲಿ ಮಲ್ನಾಡ್ ಯೂತ್ ಕ್ಲಬ್, ಫ್ರೆಂಡ್ಸ್ ಎಫ್‌ಸಿ ಸುಂಟಿಕೊಪ್ಪ ತಂಡವನ್ನು ಮಣಿಸಿ ಫೈನಲ್ ತಲುಪಿತ್ತು. ವಿಜಯನಗರ ಎಫ್‌ಸಿ ತಂಡ, ರೆಡ್ಡಿಬಾಯ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿತ್ತು.

ಮಲ್ನಾಡ್ ಯೂತ್ ಕ್ಲಬ್‌ನ ತಿಜೋ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಉತ್ತಮ ಗೋಲ್‌ಕೀಪರ್ ಮಲ್ನಾಡ್ ತಂಡದ ಅಭಿಷೇಕ್, ಉತ್ತಮ ಫುಲ್‌ಬ್ಯಾಕ್ ಮಲ್ನಾಡ್ ತಂಡದ ರಾಜು, ಸಭ್ಯತೆಯ ಆಟಗಾರ ಪ್ರಶಸ್ತಿಯನ್ನು ವಿಜಯನಗರ ಎಫ್‌ಸಿ ಆಟಗಾರ ಪ್ರವೀಣ್ ರಾಜು ಪಡೆದುಕೊಂಡರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ೭ನೇ ತರಗತಿಯ ನೀತು, ನಿಸಾನ್‌ಶೆಟ್ಟಿ, ೧೦ನೇ ತರಗತಿಯ ಚೇತನ್ ಮತ್ತು ವಿದ್ಯಾ ಅವರುಗಳಿಗೆ ಸಹಾಯಧನ ವಿತರಿಸಲಾಯಿತು. ರೈತ ಹೋರಾಟ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಡಾ.ಪುಟ್ಟರಾಜು, ಕೊರೊನಾ ಸೇನಾನಿ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಂದೂದರ್, ಕೋಚ್ ಸುದೀನ್ ಹಿರಿಕರ ಅವರುಗಳನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಜಿ.ಎಸ್.ನಾಗರಾಜ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಕಾಂಗ್ರೆಸ್ ಮುಖಂಡ ಡಾ.ಮಂಥರ್‌ಗೌಡ, ರಾಜ್ಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಹರಗ ಚೇತನ್, ರೋಟರಿ ಮಾಜಿ ಸಹಾಯಕ ರಾಜ್ಯಪಾಲ ಪಿ.ಕೆ.ರವಿ ಮತ್ತಿತರರು ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.