ಶ್ರೀಮಂಗಲ, ಏ. ೪: ಮರೆನಾಡ್ ಶೂರ‍್ಸ್ ಕ್ಲಬ್ ವತಿಯಿಂದ ಬಿರುನಾಣಿಯ ಮರೆನಾಡ್ ಪ್ರೌಢಶಾಲಾ ಮೈದಾನದಲ್ಲಿ ೨ನೇ ವರ್ಷದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು ೨೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ೧೨ ಬೋರ್ ಕೋವಿ ವಿಭಾಗದಲ್ಲಿ ನಾಪೋಕ್ಲುವಿನ ಅಜ್ಜೆಟ್ಟೀರ ಸೋಮಯ್ಯ (ಪ್ರಥಮ), ಬಾಡಗರಕೇರಿಯ ಕಳ್ಳಂಗಡ ನವೀನ್ ಚಂಗಪ್ಪ(ದ್ವಿತೀಯ), ಬಾಡಗರಕೇರಿಯ ಕುಪ್ಪುಡೀರ ಪೊನ್ನು ಮುತ್ತಪ್ಪ (ತೃತೀಯ) ಸ್ಥಾನ ಪಡೆದು ಕ್ರಮವಾಗಿ ರೂ. ೨೫ ಸಾವಿರ, ರೂ. ೨೦ ಸಾವಿರ, ರೂ. ೧೫ ಸಾವಿರ ನಗದು ಬಹುಮಾನವನ್ನು ಪ್ರಶಸ್ತಿ ಪತ್ರದೊಂದಿಗೆ ಪಡೆದರು.
ಪಾಯಿಂಟ್ ೨೨ ಕೋವಿ ವಿಭಾಗದಲ್ಲಿ ವೀರಾಜಪೇಟೆಯ ಕಬ್ಬಚ್ಚೀರ ಶರತ್ (ಪ್ರಥಮ), ಕಾಂತೂರು ಮೂರ್ನಾಡುವಿನ ಬಡುವಂಡ ದೇವಯ್ಯ (ದ್ವಿತೀಯ), ನಾಪೋಕ್ಲುವಿನ ಅಜ್ಜೆಟ್ಟೀರ ಸೋಮಯ್ಯರವರು (ತೃತೀಯ) ಸ್ಥಾನ ಪಡೆದು ಕ್ರಮವಾಗಿ ರೂ. ೨೦ ಸಾವಿರ, ರೂ. ೧೫ ಸಾವಿರ, ರೂ. ೧೦ ಸಾವಿರ ನಗದು ಬಹುಮಾನವನ್ನು ಪ್ರಶಸ್ತಿ ಪತ್ರದೊಂದಿಗೆ ಪಡೆದರು.
ಏರ್ ರೈಫಲ್ ವಿಭಾಗದಲ್ಲಿ ಸುಂಟಿಕೊಪ್ಪದ ಕೇಚೀರ ಶಮನ್ ಬೆಳ್ಳಿಯಪ್ಪ (ಪ್ರಥಮ) ಕೇಚೀರ ಶಬ್ದ್ ಬೆಳ್ಳಿಯಪ್ಪ (ದ್ವಿತೀಯ), ಕಾಂತೂರು ಮೂರ್ನಾಡುವಿನ ಬಡುವಂಡ ತ್ರಿಶಾಲಿ ತಂಗಮ್ಮ (ತೃತೀಯ) ಸ್ಥಾನ ಪಡೆದು ಕ್ರಮವಾಗಿ ರೂ. ೫ ಸಾವಿರ, ರೂ. ೩ ಸಾವಿರ ನಗದು, ೨ ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಪಡೆದರು. ಎಲ್ಲಾ ಟ್ರೋಫಿಗಳನ್ನು ಬೆಂಗಳೂರಿನ ಗುಂಬೀರ ಸÀಂತೋಷ್ ಪ್ರಾಯೋಜನೆ ಮಾಡಿದ್ದರು.
ಉದ್ಘಾಟನಾ ಸಮಾರಂಭ: ಕಾರ್ಯಕ್ರಮದ ಆರಂಭದಲ್ಲಿ ಬಾಡಗರಕೇರಿಯ ಹೈಕೋರ್ಟ್ ವಕೀಲ ಮಲ್ಲೇಂಗಡ ಗಗನ್ ಬೆಳ್ಳಿಯಪ್ಪ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗಿನ ಮೂಲ ನಿವಾಸಿಗಳಿಗೆ ಕೋವಿಯ ಹಕ್ಕು ಪಾರಂಪರಿಕವಾಗಿ ಬಂದ ಬಗೆ ವಿವರಿಸಿದರು. ಹೈಕೋರ್ಟಿನಲ್ಲಿ ಕೊಡಗಿನ ಮೂಲ ನಿವಾಸಿಗಳಿಗೆ ಇರುವ ಕೋವಿಯ ಜಮ್ಮಾ ವಿನಾಯಿತಿ ಮತ್ತು ಕೊಡವ ಜನಾಂಗಕ್ಕೆ ಇರುವ ಕೂರ್ಗ್ ಬೈ ರೇಸ್ ಕೋವಿಯ ವಿಶೇಷ ವಿನಾಯಿತಿಯನ್ನು ಯಾಲದಾಳು ಕೆ.ಚೇತನ್ ಅವರು ಪ್ರಶ್ನಿಸಿದ್ದರು. ನ್ಯಾಯಾಲಯಕ್ಕೆ ಕೋವಿ ವಿಶೇಷ ವಿನಾಯಿತಿ ಬಗ್ಗೆ ಮನವರಿಕೆ ಮಾಡಿದ ನಂತರ ನಮಗೆ ನ್ಯಾಯ ದೊರೆತಿದೆ. ಹಾಗೆಯೇ ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಯಾಲದಾಳು ಕೆ. ಚೇತನ್ ಅವರು ಪ್ರಶ್ನಿಸಿದ್ದಾರೆ. ಹೈಕೋರ್ಟಿನಲ್ಲಿ ಕಾನೂನು ಹೋರಾಟ ಮಾಡಿದ ನಮ್ಮ ಎಲ್ಲಾ ವಕೀಲರ ತಂಡ ಸುಪ್ರೀಂ ಕೋರ್ಟಿನಲ್ಲಿಯೂ ಸೂಕ್ತ ರೀತಿಯಲ್ಲಿ ಕೋವಿ ಹಕ್ಕಿನ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಸುಪ್ರೀಂ ಕೋರ್ಟಿನಲ್ಲಿಯೂ ನಮಗೆ ನ್ಯಾಯ ದೊರೆಯಲಿದೆ ವಿಶ್ವಾಸ ವ್ಯಕ್ತಪಡಿಸಿದರು.
ಬಿರುನಾಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೂಟಿಯಾಲ - ಬಿ.ಶೆಟ್ಟಿಗೇರಿ ಸಂಪರ್ಕ ರಸ್ತೆಯು ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಈ ಸಂಪರ್ಕ ರಸ್ತೆಯನ್ನು ಸಂಚಾರಕ್ಕೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ಮರೆನಾಡ್ ಶೂಟರ್ ಕ್ಲಬ್ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಅಧಿಕಾರಿ ಕಳ್ಳೇಂಗಡ ನಳಿನಿ (ಮಮತ), ಆಶಾ ಕಾರ್ಯಕರ್ತೆಯರಾದ ಬಲ್ಯಮೀದೇರಿರ ಪ್ರೀತು, ಕಳಕಂಡ ವಿಷ್ಮಾ, ಹಾಜರಿದ್ದರು.
ಸನ್ಮಾನ: ಇದೇ ಸಂದರ್ಭ ಸ್ಥಳೀಯರಾಗಿ ನಾಡಿನ ಒಳಿತಿಗಾಗಿ ಶ್ರಮಿಸುತ್ತಿರುವ ಹೈಕೋರ್ಟ್ ವಕೀಲ ಮಲ್ಲೇಂಗಡ ಗಗನ್ ಬೆಳ್ಳಿಯಪ್ಪ, ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಅಧಿಕಾರಿ ಕಳ್ಳೇಂಗಡ ನಳಿನಿ (ಮಮತ), ಆಶಾ ಕಾರ್ಯಕರ್ತೆಯರಾದ ಬಲ್ಯಮೀದೇರಿರ ಪ್ರೀತು, ಕಳಕಂಡ ವಿಷ್ಮಾ ಅವರನ್ನು ಸನ್ಮಾನಿಸಲಾಯಿತು.
ಮರೆನಾಡ್ ಶೂರ‍್ಸ್ ಕ್ಲಬ್‌ನ ಕಾರ್ಯದರ್ಶಿ ನೆಲ್ಲೀರ ಧನಂಜಯ, ಖಜಾಂಚಿ ಕಳ್ಳೇಂಗಡ ನವೀನ್ ಚಂಗಪ್ಪ, ಸದಸ್ಯರುಗಳಾದ ಚೇರಂಡ ಕಾರ್ಯಪ್ಪ, ಬಲ್ಯಮೀದೇರಿರ ಶರೀನ್, ಕಾಯಪಂಡ ಮೋಹನ್, ಕುಪ್ಪುಡೀರ ಪ್ರಖ್ಯಾತ್, ಕುಪ್ಪಣಮಾಡ ಮಂಜು, ನೆಲ್ಲೀರ ರಾಕೇಶ್, ಚೋನೀರ ಸೋಮಣ್ಣ, ಚೋನೀರ ಸಜನ್ ಉತ್ತಪ್ಪ, ಕಾಳಿಮಾಡ ಶರತ್, ಕರ್ತಮಾಡ ಸಜನ್, ಹಾಜರಿದ್ದರು.