ಮಡಿಕೇರಿ, ಏ. ೪: ಕರ್ನಾಟಕ ಸರಕಾರದ ಅಬಕಾರಿ ಇಲಾಖೆ ವೀರಾಜಪೇಟೆ ತಾಲೂಕು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಇವರ ಸಂಯುಕ್ತಾಶ್ರಯದಲ್ಲಿ ‘ಮಾದಕ ವ್ಯಸನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಎಂ.ಎನ್. ನಟರಾಜ್ ಸಹಾಯಕ ಅಧೀಕ್ಷಕರು, ಅಬಕಾರಿ ಇಲಾಖೆ ವೀರಾಜಪೇಟೆ ಇವರು ಅಮಾಯಕ ವಿದ್ಯಾರ್ಥಿಗಳು ಹೇಗೆ ಮಾದಕ ವ್ಯಸನಕ್ಕೆ ದಾಸರಾಗುತ್ತಾರೆ ಹಾಗೂ ಹೇಗೆ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ತಮಗೆ ತಿಳಿಯದಂತೆ ಭಾಗಿಯಾಗುತ್ತಾರೆ ಎಂಬುದರ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಟಿ.ಕೆ. ಬೋಪಯ್ಯ ಅವರು ವಹಿಸಿದ್ದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಮಿತಿ ಸಂಚಾಲಕ ವೇಣುಗೋಪಾಲ್ ಹೆಚ್.ಎಸ್. ಸ್ವಾಗತಿಸಿ, ವಂದಿಸಿದರು. ಮೋಹನ್‌ಕುಮಾರ್ ಸಬ್‌ಇನ್ಸ್ಪೆಕ್ಟರ್, ಅಬಕಾರಿ ಇಲಾಖೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಹಾಗೂ ಆಪ್ತಸಮಾಲೋಚನಾ ಸಮಿತಿಯ ಸಂಚಾಲಕಿ ಸುನೀತಾ ಎ.ಎಂ. ಹಾಜರಿದ್ದರು.

ಕಾಲೇಜಿನ ಸುಮಾರು ೩೦೦ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.