ಸೋಮವಾರಪೇಟೆ,ಏ.೪: ಇಲ್ಲಿನ ಪಶು ವೈದ್ಯಕೀಯ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ ಖಾಸಗಿ ವ್ಯಕ್ತಿಯೋರ್ವರು ಜೆಸಿಬಿಯಿಂದ ಮಣ್ಣು ತೆಗೆದು ಕಾಮಗಾರಿ ಆರಂಭಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ತಾಲೂಕು ತಹಶೀಲ್ದಾರ್ಗೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯ ಸ್ವಾಧೀನದಲ್ಲಿರುವ ಜಾಗಕ್ಕೆ ಒತ್ತಿಕೊಂಡAತೆ ಇರುವ ಚೌಡ್ಲು ಗ್ರಾಮದ ಸ.ನಂ. ೧೯೦/೧೨ರ ಮಾಲೀಕರು ಆಸ್ಪತ್ರೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ ಮಣ್ಣು ಅಗೆದು ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪಶುವೈದ್ಯಕೀಯ ಇಲಾಖೆಗೆ ಸೇರಿದ ಜಾಗದಲ್ಲಿ ಮಣ್ಣು ಅಗೆದಿರುವುದರಿಂದ ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಹಾನಿಯಾಗುವ ಸಂಭವವಿದ್ದು, ಒಂದು ವೇಳೆ ಸರ್ಕಾರಿ ಜಾಗ ಹಾಗೂ ಕಟ್ಟಡಕ್ಕೆ ತೊಂದರೆಯಾದಲ್ಲಿ ಖಾಸಗಿ ಜಾಗದ ಮಾಲೀಕರನ್ನೇ ಹೊಣೆಯನ್ನಾಗಿಸ ಬೇಕು. ತಕ್ಷಣಕ್ಕೆ ಸರ್ವೆ ಇಲಾಖೆಯಿಂದ ಸರ್ವೆ ನಡೆಸಬೇಕೆಂದು ತಹಶೀಲ್ದಾರ್ಗೆ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಅವರು ದೂರು ನೀಡಿದ್ದಾರೆ.
ಈ ದೂರಿಗೆ ತಕ್ಷಣ ಸ್ಪಂದಿಸಿರುವ ತಹಶೀಲ್ದಾರ್ ಗೋವಿಂದರಾಜು ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರವಾಗಿ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ವೆ ಇಲಾಖೆಗೆ ಸೂಚಿಸಿದ್ದು, ಇಲಾಖೆಯಿಂದ ಸರ್ವೆ ಕಾರ್ಯ ಆರಂಭವಾಗಿದೆ. ಈ ನಡುವೆ ಪಂಚಾಯಿತಿಯಿAದ ಯಾವುದೇ ಪರವಾನಗಿ ಪಡೆಯದೇ ಮಣ್ಣು ಅಗೆದಿರುವ ಹಿನ್ನೆಲೆ ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಜಾಗದ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಕಠಿಣ ಕ್ರಮಕ್ಕೆ ರಂಜನ್ ಸೂಚನೆ: ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಜೆಸಿಬಿ ಯಂತ್ರ ಬಳಸಿ ಮಣ್ಣು ಅಗೆದಿರುವುದು ಹಾಗೂ ಯಾವುದೇ ಪರವಾನಗಿ ಪಡೆಯದೇ ಯಂತ್ರಗಳನ್ನು ಆಸ್ಪತ್ರೆ ಆವರಣಕ್ಕೆ ತಂದು ರಸ್ತೆ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಶಾಸಕ ಅಪ್ಪಚ್ಚುರಂಜನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ದೂರಿನ ಹಿನ್ನೆಲೆ ಸ್ಥಳಪರಿಶೀಲನೆ ನಡೆಸಿದ ಶಾಸಕರು, ಜಾಗದ ಮಾಲೀಕರು ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿಲ್ಲ. ಹೀಗೆ ಮುಂದುವರೆದರೆ ಅಧಿಕಾರಿಗಳನ್ನು ಅಮಾನತ್ತು ಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವಸ್ತುನಿಷ್ಠವಾಗಿ ಸರ್ವೆ ನಡೆಸಿ, ಸರ್ಕಾರಿ ಜಾಗವನ್ನು ಉಳಿಸಿಕೊಳ್ಳಲು ಕ್ರಮವಹಿಸಬೇಕು. ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ರಂಜನ್ ಎಚ್ಚರಿಕೆ ನೀಡಿದರು. ಈ ಸಂದರ್ಭ ತಹಶಿಲ್ದಾರ್ ಗೋವಿಂದರಾಜು, ಸರ್ವೆಯರ್ ರವಿ, ಕಂದಾಯ ಇಲಾಖೆಯ ಪ್ರಹ್ಲಾದ್, ಶ್ವೇತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.