ಗೋಣಿಕೊಪ್ಪಲು, ಏ.೩: ಕಳೆದ ಆರು ದಿನಗಳಿಂದ ಹುಲಿ ಕಾರ್ಯಾಚರಣೆಯಲ್ಲಿರುವ ಅರಣ್ಯ ಇಲಾಖೆಯ ತಂಡಗಳು ಅರಣ್ಯ ಪ್ರದೇಶ ಸೇರಿದಂತೆ ಗುಡ್ಡ ಬೆಟ್ಟ ಪ್ರದೇಶಗಳಲ್ಲಿ ಸಂಚಾರ ನಡೆಸಿ ಹುಲಿಯ ಹೆಜ್ಜೆ ಗುರುತಿಗಾಗಿ ಹುಡುಕಾಟ ನಡೆಸುತ್ತಿದೆ.

ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಭಾಗದ ಕಲ್ಲುಕೋರೆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿಯು ಇದೀಗ ತನ್ನ ಸ್ಥಳವನ್ನು ಬದಲಾಯಿಸಿ, ಕುಂದ ಈಚೂರು ಬಳಿ ಹೆಜ್ಜೆ ಹಾಕಿದೆ. ಹುಲಿ ಸಾಗಿದ ಹೆಜ್ಜೆಗಳನ್ನು ಅರಸಿ ಹೊರಟಿರುವ ತಂಡ ಇದೀಗ ಈಚೂರು ಬಳಿ ಸಾಗಿದೆ.

ನುರಿತ ತಜ್ಞ ವೈದ್ಯರು, ಶಾರ್ಪ್ ಶೂಟರ್ ಹಾಗೂ ಸಾಕಾನೆಗಳಾದ ಶ್ರೀಕಂಠ, ಭೀಮಾ ಹಾಗೂ ಮಹೇಂದ್ರ ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಆದರೆ ಹುಲಿಯು ಕಾರ್ಯಾಚರಣೆ ತಂಡಕ್ಕೆ ಎಲ್ಲಿಯೂ ಕಾಣಿಸಿಕೊಳ್ಳದೇ ತನ್ನ ಸ್ಥಳವನ್ನು ಬದಲಿಸುತ್ತಾ ಸಾಗುತ್ತಿದೆ.

ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶವು ಈ ಭಾಗದಲ್ಲಿ ಇರುವ ಕಾರಣ ಹುಲಿಯು ಈ ಭಾಗದಿಂದ ಆಗಮಿಸುತ್ತಿದೆ. ಅಲ್ಲದೇ ನಂತರ ಬಂದ ಮಾರ್ಗದಲ್ಲಿ ಬ್ರಹ್ಮಗಿರಿ ಅರಣ್ಯದತ್ತ ಹೆಜ್ಜೆ ಹಾಕುತ್ತಿರುವುದರಿಂದ ಕಾರ್ಯಾಚರಣೆ ತಂಡಕ್ಕೆ ಇದು ಸವಾಲಾಗಿ ಪರಿಣಮಿಸಿದೆ.

ಎರಡು ಕಡೆ ಬೋನ್ ಅಳವಡಿಕೆ

ಹುಲಿಯ ಹೆಜ್ಜೆ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಇದೀಗ ಹುಲಿಯನ್ನು ಹಿಡಿಯುವ ಸಲುವಾಗಿ ಬೇರೆ, ಬೇರೆ ಸ್ಥಳದಲ್ಲಿ ಎರಡು ಬೋನನ್ನು ಅಳವಡಿಸಿದೆ. ಹುಲಿಯನ್ನು ಬೋನಿನತ್ತ ಸೆಳೆಯುವ ಉದ್ದೇಶದಿಂದ ಬೋನಿನಲ್ಲಿ ಮೇಕೆಗಳನ್ನಿಟ್ಟು ಹುಲಿ ಬರಬಹುದು ಎಂದು ಕಾರ್ಯಾಚರಣೆ ತಂಡ ಕಾದುನೋಡುತ್ತಿದೆ. - ಹೆಚ್.ಕೆ. ಜಗದೀಶ್