ಶ್ರೀಮಂಗಲ, ಏ. ೩: ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡಬೇಕು.ಈ ನಿಟ್ಟಿನಲ್ಲಿ ತಿಳುವಳಿಕೆ ಅಗತ್ಯ ಎಂದು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರು ಸಲಹೆ ನೀಡಿದರು. ಪೊನ್ನಪ್ಪಸಂತೆಯ ಸಾಧನಾ ಲೇಡೀಸ್ ಅಸೋಸಿಯೇಷನ್ ಸ್ಥಾಪನೆಯಾಗಿ ೧೦ ವರ್ಷ ತುಂಬಿದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಅಸೋಸಿಯೇಷನ್ನಿಂದ ಸರಕಾರದಿಂದ ನಡೆಯುವ ಆರೋಗ್ಯ ತಪಾಸಣಾ ಶಿಬಿರವನ್ನು ಮುಂದಿನ ದಿನಗಳಲ್ಲಿ ಆಯೋಜಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವಂತೆ ಡಾ. ಯತಿರಾಜ್ ಸಲಹೆ ನೀಡಿದರು.ಈ ಸಂದರ್ಭ ಮಹಿಳೆಯರ ಆರೋಗ್ಯದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷೆ ಕಾಂಡೇರ ರೂಪ ಕುಮಾರ್ ಅವರು ಎಲ್ಲಾ ಸದಸ್ಯರ ಸಹಕಾರದಿಂದ ಸಂಸ್ಥೆ ೧೦ ವರ್ಷ ಪೂರೈಸಿದೆ. ಕಣ್ಣಿನ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾವಂತ ಶಿಕ್ಷಕಿಯರಿಗೆ ಸನ್ಮಾನ, ವೈದ್ಯರ ಮೂಲಕ ಆರೋಗ್ಯ ಸಲಹೆ ಸೇರಿದಂತೆ ಪ್ರಸಕ್ತ ವರ್ಷ ಹಲವಾರು ಕಾರ್ಯಕ್ರಮ ನಡೆಸಲಾಗಿದೆ. ಮುಂದೆಯೂ ಎಲ್ಲರ ಸಹಕಾರದಿಂದ ಸಾಮಾಜಿಕ ಸೇವೆ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸ ಲಾಗುವುದೆಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪುಳ್ಳಂಗಡ ರೀನಾ ದಿನೇಶ್, ಕಾರ್ಯದರ್ಶಿ ಕಾಂಡೇರ ಹೇಮರಮೇಶ್, ಸದಸ್ಯೆ ಕೊಳುವಂಡ ಕವಿತಾ ಸುಬ್ರಮಣಿ ಹಾಜರಿದ್ದರು.