(ಚಿತ್ರ-ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಏ.೧: ಮಾನವನ ರಕ್ತ ಹೀರಿ ತನ್ನ ಸ್ಥಳವನ್ನು ಬದಲಾಯಿಸಿರುವ ನರಹಂತಕ ಹುಲಿಯು ಕುಟ್ಟಂದಿ ಸಮೀಪದ ದಟ್ಟ ಅರಣ್ಯದ ಕಲ್ಲುಕೋರೆ ಬಳಿ ಇದರ ಚಿತ್ರ ಸೆರೆಯಾಗಿದೆ. ಇಲಾಖೆಯ ಕ್ಯಾಮರಾದಲ್ಲಿ ವ್ಯಾಘ್ರನ ಸಂಚಾರ ದೃಢ ಪಡುತ್ತಿದ್ದಂತೆಯೇ ಜಾಗೃತರಾದ ಹುಲಿ ಕಾರ್ಯಾಚರಣೆ ತಂಡ ಇತ್ತ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಕ್ಯಾಮರಾದಲ್ಲಿ ಸಿಕ್ಕಿರುವ ಹುಲಿಯ ಚಿತ್ರವನ್ನು ಹಿರಿಯ ಅಧಿಕಾರಿಗಳನ್ನು ಪರಿಶೀಲನೆ ನಡೆಸಿ ಇದರ ನಿಖರತೆಯನ್ನು ಹಾಗೂ ಹುಲಿಯ ವಿವರವನ್ನು ಪಡೆಯಲು ಸಂಬAಧಪಟ್ಟ ತಜ್ಞರಿಗೆ ಕಳುಹಿಸಿಕೊಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹುಲಿಯ ಜಾಡನ್ನು ಅರಸಿ ಹೊರಟ ಕಾರ್ಯಾಚರಣೆ ತಂಡಕ್ಕೆ ಗುರುವಾರ ಸಂಜೆ ಹಾಗೂ ಶುಕ್ರವಾರ ಮುಂಜಾನೆ ಬಿ.ಶೆಟ್ಟಿಗೇರಿ ಬಳಿಯ ಕುಟ್ಟಂದಿ ಕಲ್ಲುಕೋರೆ ಬಳಿ ಹುಲಿಯ ಹೆಜ್ಜೆ ಗುರುತುಗಳು ಗೋಚರಿಸಿದ್ದವು. ಇವುಗಳ ಹೆಜ್ಜೆಯನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ತಂಡ ಕಲ್ಲುಕೋರೆಯ ಸಮೀಪವಿರುವ ಪಾಳು ಬಿದ್ದ ಕಾಡಿನಲ್ಲಿ ಹುಲಿಯು ಇರಬಹುದು ಎಂಬ ನಿಟ್ಟಿನಲ್ಲಿ ಕಾರ್ಯಾಚರಣೆಯ ಎರಡು ತಂಡಗಳು ಶುಕ್ರವಾರ ಶೋಧ ಕಾರ್ಯ ಮುಂದುವರೆಸಿತು. ಈ ಭಾಗದಲ್ಲಿ
(ಮೊದಲ ಪುಟದಿಂದ) ೪ಕ್ಕೂ ಅಧಿಕ ಕಲ್ಲು ಕೋರೆಗಳಿದ್ದು ಕೋರೆಯಲ್ಲಿ ಹುಲಿಯು ಅಡಗಿರಬಹುದೆಂಬ ಮಾಹಿತಿಯು ಇಲಾಖೆಯ ಸಿಬ್ಬಂದಿಗಳಿಗೆ ದೊರಕಿದೆ. ಆದ್ದರಿಂದ ಈ ಪ್ರದೇಶದ ಸುತ್ತಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿಯ ಜಾಡನ್ನು ಹುಡುಕುತ್ತಿದ್ದಾರೆ.
ಶುಕ್ರವಾರ ಮುಂಜಾನೆ ಎರಡು ವಿಶೇಷ ತಂಡಗಳು ಆನೆಗಳ ಸಹಾಯ ಪಡೆದು ಈ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಹುಲಿಯ ಸೆರೆಗೆ ಬೇಕಾದ ಅಗತ್ಯ ಪರಿಕರಗಳನ್ನು ಈ ಭಾಗದಲ್ಲಿ ಸಂಗ್ರಹಿಸಿಟ್ಟಿರುವ ತಂಡ ಹುಲಿ ಸೆರೆ ಆದ ತಕ್ಷಣ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಂಡದ ಸದಸ್ಯರು ಅಧಿಕಾರಿಗಳು ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ಭಾಗದಲ್ಲಿ ಹುಲಿಯ ಚಲನ ವಲನ ವೀಕ್ಷಿಸಲು ವಾಚ್ ಟವರ್ ನಿರ್ಮಿಸಲಾಗಿದ್ದು, ಅನುಭವಿ ಶಾರ್ಫ್ಶೂರ‍್ಸ್, ಅರವಳಿಕೆ ತಜ್ಞರು, ವೈದ್ಯರು, ವಾಚ್‌ಟವರ್‌ನಲ್ಲಿ ಹುಲಿಯ ಓಡಾಟದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನಾಗರಹೊಳೆ ವನ್ಯಜೀವಿ ವಿಭಾಗದ ಡಿಎಫ್‌ಒ, ಶಿವರಾಮ್ ಬಾಬು, ಮಡಿಕೇರಿ ಡಿಎಫ್‌ಒ ಎ.ಟಿ.ಪೂವಯ್ಯ ಹಾಗೂ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ, ಇವರ ಮಾರ್ಗದರ್ಶನದಲ್ಲಿ ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಅಶೋಕ್ ಹುನಗುಂದ, ದಿವಾಕರ್ ಮತ್ತಿತ್ತರರು ಕಾರ್ಯಾಚರಣೆಯ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆ ಗ್ರಾಮದಲ್ಲಿ ಅಯ್ಯಪ್ಪ ಎಂಬವರ ತೋಟದಲ್ಲಿ ಕರಿಮೆಣಸು ಕುಯ್ಯಲು ಏಣಿಯೊಂದಿಗೆ ಕಾಫಿತೋಟದಲ್ಲಿ ತೆರಳುತ್ತಿದ್ದ ವೇಳೆ ಗಣೇಶ್ ಎಂಬವರ ಮೇಲೆ ಹುಲಿಯು ದಾಳಿ ನಡೆಸಿ ಈತನನ್ನು ಸ್ಥಳದಲ್ಲಿಯೇ ಸಾಯಿಸಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಭಯದ ವಾತಾವರಣ ನಿರ್ಮಿಸಿತ್ತು. ಇದೀಗ ಹುಲಿಯು ಈ ಭಾಗದಿಂದ ತನ್ನ ಸ್ಥಳವನ್ನು ಬದಲಾಯಿಸಿದ್ದು, ಬಿ.ಶೆಟ್ಟಿಗೇರಿ ಕೊಂಗಣ ಬಳಿಯ ಕಲ್ಲುಕೋರೆಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಕ್ಯಾಮರಾಕ್ಕೆ ಸೆರೆಯಾಗಿರುವ ಚಿತ್ರಗಳು ಪುಷ್ಠಿ ನೀಡಿವೆ. ಹುಲಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ತಜ್ಞರ ಮಾಹಿತಿಗಾಗಿ ಕಾರ್ಯಾಚರಣೆ ತಂಡ ಎದುರು ನೋಡುತ್ತಿದೆ. ಒಂದು ವೇಳೆ ಹುಲಿಯ ನಿಖರತೆ ಸ್ಪಷ್ಟವಾದಲ್ಲಿ ಈ ಹುಲಿಯನ್ನು ಸೆರೆ ಹಿಡಿಯುವ ಬಗ್ಗೆ ಸಕಲ ವ್ಯವಸ್ಥೆಗಳೊಂದಿಗೆ ಕಾರ್ಯಾಚರಣೆ ತಂಡ ಸನ್ನದ್ದವಾಗಿದೆ. ನಾಲ್ಕು ದಿನಗಳಿಂದ ಕಾರ್ಯಾಚರಣೆ ತಂಡವು ಕಾಡು ಮೇಡು ಲೆಕ್ಕಿಸದೆ ಹುಲಿಯ ಜಾಡನ್ನು ಅರಸಿ ತೆರಳಿದ್ದು ಇದೀಗ ಹುಲಿಯಚಿತ್ರ ಸೆರೆಯಾದ ಹಿನ್ನಲೆಯಲ್ಲಿ ಹುಲಿಯನ್ನು ಖೆಡ್ಡಾಕ್ಕೆ ಬೀಳಿಸುವ ಆಶಾ ಭಾವನೆಯಲ್ಲಿದ್ದಾರೆ.