ಮಡಿಕೇರಿ, ಮಾ. ೩೧: ಕ್ಷಯ ಮುಕ್ತ ಕರ್ನಾಟಕ ಯೋಜನೆ ಯಡಿಯಲ್ಲಿ ಕೊಡಗು ಜಿಲ್ಲೆಯು ಸಂಪೂರ್ಣವಾಗಿ ಕ್ಷಯರೋಗದಿಂದ ಮುಕ್ತವಾಗುವ ಹಂತದಲ್ಲಿದ್ದು ಇದರ ಯಶಸ್ಸಿಗೆ ಜಿಲ್ಲೆಯ ಆಯುಷ್ ವೈದ್ಯರ ಸಹಕಾರ ಅಗತ್ಯ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಆನಂದ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ ಆಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ ನಿರಂತರ ವೈದ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ಷಯ ರೋಗ ನಿರ್ಮೂಲನೆಯ ನೂತನ ಚಿಕಿತ್ಸಾ ಮಾರ್ಗದರ್ಶಿಗಳ ಬಗ್ಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಅಧಿಕಾರಿ ಪಿ. ಚಂದನ್ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪರಿಸರಾಧಿಕಾರಿ ಉಮಾಶಂಕರ್ ಜೈವಿಕ ತ್ಯಾಜ್ಯಗಳ ವಿಲೇವಾರಿ ಮಾಡುವ ವಿಧಾನಗಳ ಬಗ್ಗೆ ವಿವರಿಸಿದರು. ಡಾ. ಸೌಮ್ಯ ನಿರೂಪಿಸಿ, ಡಾ. ಉದಯ ಶಂಕರ್ ಸ್ವಾಗತಿಸಿ, ಕೊಡಗು ನಿಮಾ ಅಧ್ಯಕ್ಷ ಡಾ. ರಾಜಾರಾಮ್ ವಂದಿಸಿದರು.