ಗೋಣಿಕೊಪ್ಪ ವರದಿ, ಮಾ. ೩೧: ಅರಣ್ಯ ಇಲಾಖೆ ಹುದ್ದೆಯಲ್ಲಿ ಅರಣ್ಯ ಶಾಸ್ತç ಪದವಿಧರರಿಗೆ ಮೀಸಲಿಟ್ಟಿದ್ದ ಶೇಕಡ ೭೫ ರ ಮೀಸಲಾತಿಯನ್ನು ಶೇ. ೫೦ ಕ್ಕೆ ಕಡಿತಗೊಳಿಸಿರುವುದನ್ನು ಖಂಡಿಸಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕಾಲೇಜು ಆವರಣದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ನಮ್ಮ ಭವಿಷ್ಯದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದು ವೈಜ್ಞಾನಿಕ ಕ್ರಮವಲ್ಲ ಎಂದು ಪ್ರತಿಭಟಿಸಿದರು.

ಭಾರತೀಯ ಅರಣ್ಯ ನೀತಿಯಲ್ಲಿ ಅರಣ್ಯ ಸೇವೆ ಮತ್ತು ರಾಜ್ಯ ಅರಣ್ಯ ಸೇವೆಗಳಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರಣ್ಯಶಾಸ್ತç ಪದವಿ ಪಡೆದಿರುವ ಬಗ್ಗೆ ಉಲ್ಲೇಖವಿದೆ. ಪರಿಸರ ನಾಶ ತಡೆಯಲು, ಅವೈಜ್ಞಾನಿಕ ಅರಣ್ಯ ಸಂರಕ್ಷಿಸಲು ತಡೆಯಲು ಅರಣ್ಯ ಪದವೀಧರರಿಗೆ ಅವಕಾಶ ನೀಡಲು ನಿಯಮವಿದೆ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಶಿರಸ್ತೇದಾರ್ ರಾಧಾಕೃಷ್ಣ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.