ಮೈಸೂರು, ಮಾ. ೩೧: ಪರಸ್ಪರ ಪ್ರೀತಿಸಿ ಜೋಡಿ ಹಕ್ಕಿಗಳಾಗಿ ಹಾರಿ ಬಂದು ಕೊಡಗಿನ ದೇವಾಲಯದಲ್ಲಿ ಮದುವೆ ಆಗಿದ್ದ ನವ ಜೋಡಿಯೊಂದು ಮದುವೆಯ ಮಾರನೇ ದಿನವೇ ಬೇರ್ಪಡೆ ಆಗಿರುವ ಘಟನೆ ಮಾರ್ಚ್ ೨೯ ರಂದು ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಗೆ ಅನನ್ಯ ಕುಟುಂಬದ ತೀವ್ರ ವಿರೋಧವಿತ್ತು. ಆಕೆಯೊಂದಿಗೆ ಸಂಪರ್ಕ ಕಡಿತಗೊಳಿಸುವಂತೆ ಅನನ್ಯ ಕುಟುಂಬಸ್ಥರು ಅಭಿಷೇಕ್‌ಗೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ವಿರೋಧದ ನಡುವೆಯೂ ಯುವ ಜೋಡಿಗಳು ಅಭಿಷೇಕ್ ಕುಟುಂಬಸ್ಥರೊAದಿಗೆ ಮಾರ್ಚ್ ೨೮ ರಂದು ಜಿಲ್ಲೆಯ ಗಡಿ ಭಾಗದ ಕೊಡ್ಲಿಪೇಟೆ ಸಮೀಪದ ಬೆಸೂರಿನಲ್ಲಿರುವ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಯುವಕನ ಪೋಷಕರು ಈ ದೇವಾಲಯದ ಭಕ್ತರಾಗಿದ್ದುದೇ ಅಷ್ಟು ದೂರದಿಂದ ಇಲ್ಲಿಗೆ ಬಂದು ಮದುವೆ ಆಗಲು ಕಾರಣವಾಗಿತ್ತು.

ಮದುವೆ ಮಾಡಿಕೊಂಡ ದಂಪತಿ ಹೊಸ ಬದುಕಿನ ಕನಸು ಕಾಣುತಿದ್ದರು. ಆದರೆ ಮಾರನೇ ದಿನವೇ ಇಬ್ಬರೂ ಬೇರ್ಪಡೆ ಆಗಿದ್ದಾರೆ. ಅನನ್ಯ ನಾಪತ್ತೆ ಆದ ಬೆನ್ನಲ್ಲೇ ಆಕೆಗಾಗಿ ಹುಡುಕಾಟ ಆರಂಭಿಸಿದ ಕುಟುಂಬಸ್ಥರು ಬೆಸೂರಿನಲ್ಲಿ ಮದುವೆ ಆಗಿರುವುದನ್ನು ಪತ್ತೆ ಹಚ್ಚಿ ಅವರನ್ನೇ ಹಿಂಬಾಲಿಸಿಕೊAಡು ಬಂದಿದ್ದಾರೆ. ಮದುವೆ ಮುಗಿಸಿಕೊಂಡು ಮಂಗಳವಾರ ಮಂಡ್ಯದೆಡೆಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಹುಣಸೂರು ಬಳಿಯ ಹುಣಸೂರು ಕೆಫೆ ಕಾಫಿ ಡೇ ಬಳಿ ಮಧ್ಯಾಹ್ನ ೨ ಗಂಟೆಗೆ ಮದುವೆ ತಂಡ ಇದ್ದ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಅಭಿಷೇಕ್‌ನ ಮೇಲೆ ಹಲ್ಲೆ ನಡೆಸಿ ಅನನ್ಯಳನ್ನು ಬಲವಂತವಾಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ತನ್ನ ಪತ್ನಿಯನ್ನು ಆಕೆಯ ಇಚ್ಚೆಗೆ ವಿರುದ್ಧವಾಗಿ ಬಲಾತ್ಕಾರ ದಿಂದ ಅಪಹರಿಸಿಕೊಂಡು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅಭಿಷೇಕ್ ಆರೋಪಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿರುವ ಕುರಿತು ಹುಣಸೂರು ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಭಿಷೇಕ್ ಆರೋಪಿಸಿದ್ದಾರೆ.

-ಕೋವರ್ ಕೊಲ್ಲಿ ಇಂದ್ರೇಶ್