ಚೆಟ್ಟಳ್ಳಿ, ಮಾ. ೩೧: ಎಲ್ಲಾ ಜನಾಂಗದವರನ್ನು ಒಂದುಗೂಡಿಸಿ ಜಾತ್ಯತೀತವಾಗಿ ಎಲ್ಲರನ್ನೂ ಒಂದೇ ವೇದಿಕೆಯಡಿ ತಂದು ದೊಡ್ಡಮಟ್ಟದ ಕ್ರೀಡಾಕೂಟಗಳು ಸಮಾಜದಲ್ಲಿ ನಡೆಯುವಂತಾಗಲಿ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಆಶಿಸಿದರು.

ಚೇರಳ ಗೌಡ ಸಂಘ ಹಾಗೂ ಯುವ ಬ್ರಿಗೇಡ್ ಚೆಟ್ಟಳ್ಳಿ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಗೌಡ ಕುಟುಂಬಗಳ ನಡುವಿನ ಕಾಲ್ಚೆಂಡು ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಎಲ್ಲಾ ಜನಾಂಗದವರು ಒಂದುಗೂಡಿ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದು ಸೋಮಣ್ಣ ಕರೆ ನೀಡಿದರು. ಉದ್ಯಮಿ ಪೊನ್ನಚ್ಚನ ಮಧು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗೌಡ ಕುಟುಂಬಗಳ ನಡುವಿನ ಕ್ರೀಡಾಕೂಟಗಳು ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗುತ್ತಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗೌಡ ಕುಟುಂಬಗಳ ನಡುವಿನ ಕ್ರೀಡಾಕೂಟಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದುಗೂಡಿ ಮಡಿಕೇರಿಯಲ್ಲಿ ಗೌಡ ಕುಟುಂಬಗಳ ನಡುವಿನ ಕ್ರೀಡಾಕೂಟಗಳು ನಡೆಯುವಂತಾಗಲಿ ಎಂದು ಹೇಳಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯಯನ್ನು ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ವಹಿಸಿದ್ದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಚೇರಳ ಗೌಡ ಸಂಘದ ಖಜಾಂಚಿ ಮುಕ್ಕಾಟಿ ಪಳಂಗಪ್ಪ, ಕಾರ್ಯದರ್ಶಿ ಆಜೀರ ಧನಂಜಯ, ಉಪಾಧ್ಯಕ್ಷ ಹೊಸಮನೆ ಪೂವಯ್ಯ ಹಾಗೂ ಇನ್ನಿತರರು ಇದ್ದರು.