ಸೋಮವಾರಪೇಟೆ, ಮಾ. ೩೦: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿಗೆ ಸಂಬAಧಿಸಿದAತೆ ವಾರ್ಷಿಕ ಬಜೆಟ್ ಮಂಡನೆಯಾಗಿದ್ದು, ರೂ. ೩.೫೩ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅವರು ರೂ. ೯೯೮.೧೫ ಲಕ್ಷ ಮೊತ್ತದ ಬಜೆಟ್ ಮಂಡಿಸಿದ್ದು, ಇದರಲ್ಲಿ ೯೯೪.೬೧ ಲಕ್ಷ ಖರ್ಚು ಅಂದಾಜಿಸುವ ಮೂಲಕ ವಾರ್ಷಿಕ ವಾಗಿ ಪಂಚಾಯಿತಿಗೆ ರೂ. ೩.೫೩ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ.
ಮೂಲಭೂತ ಸೌಕರ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದ್ದು, ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ಮತ್ತು ಅನುದಾನ ಪಡೆಯಲು ಉದ್ದೇಶಿಸಲಾಗಿದೆ.
ಸೋಮವಾರಪೇಟೆ ಪಟ್ಟಣವು ೮.೩೩ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಹಲವು ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಈಗಿರುವ ಸೌಕರ್ಯಗಳ ಸುಧಾರಣೆಯತ್ತ ಮುನ್ನೋಟ ಬೀರಲಾಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ ವ್ಯವಸ್ಥೆಗಳಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ದಿಸೆಯಲ್ಲಿ ಬಜೆಟ್ ಮಂಡಿಸಲಾಗಿದ್ದು, ಪಂಚಾಯಿತಿಯ ಸ್ಥಿರಾಸ್ತಿಗಳ ನಿರ್ಮಾಣದತ್ತಲೂ ಗಮನ ಹರಿಸಲಾಗಿದೆ.
ಪಂಚಾಯಿತಿಗೆ ಒಳಗೊಂಡ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ, ಮಾರುಕಟ್ಟೆ ಬಾಡಿಗೆಯೊಂದಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳಾದ ಎಸ್‌ಎಫ್‌ಸಿ, ೧೫ನೇ ಹಣಕಾಸು ಯೋಜನೆಯ ಅನುದಾನಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವತ್ತ ಆಡಳಿತ ವರ್ಗ ಗಮನ ಹರಿಸಿದೆ. ಈ ಅನುದಾನಗಳ ಆಧಾರದ ಮೇಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಬೀದಿದೀಪ ನಿರ್ವಹಣೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಾಣಿಜ್ಯ ಮಳಿಗೆ ನಿರ್ಮಾಣ, ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಿದೆ.
೨೦೨೨-೨೩ನೇ ಸಾಲಿನಲ್ಲಿ ವೇತನ ಅನುದಾನ ೧.೨೦ ಕೋಟಿ, ಎಸ್‌ಎಫ್‌ಸಿ ಅನದಾನ ೩೦ ಲಕ್ಷ, ದಂಡ ೫ ಲಕ್ಷ, ಮಳಿಗೆ ಬಾಡಿಗೆ ೫೦ ಲಕ್ಷ, ಕಟ್ಟಡ ಪರವಾನಗಿ ಶುಲ್ಕ ೪.೨೫ ಲಕ್ಷ, ಉದ್ದಿಮೆ ಪರವಾನಗಿ ೫.೫೦ ಲಕ್ಷ, ವಿದ್ಯುತ್ ಅನುದಾನ ೫೦ ಲಕ್ಷ, ಹರಾಜು ೧೭ ಲಕ್ಷ, ನೀರು ಸರಬರಾಜು ವಿದ್ಯುತ್ ಅನುದಾನ ೧೦೦ ಲಕ್ಷ, ನೀರಿನ ಕಂದಾಯ ೨೫ ಲಕ್ಷ, ಆಸ್ತಿ ತೆರಿಗೆ ಆದಾಯ ೩೯ ಲಕ್ಷ, ೧೫ನೇ ಹಣಕಾಸು ಯೋಜನೆಯಿಂದ ೭೦ ಲಕ್ಷ, ಬರಪರಿಹಾರ ೧೫ ಲಕ್ಷ, ಮಳೆಹಾನಿ ದುರಸ್ತಿ ೧೦೦ ಲಕ್ಷ, ಘನತ್ಯಾಜ್ಯ ವಿಲೇವಾರಿ ಅನುದಾನ ೧೮೦ ಲಕ್ಷ, ವಿಶೇಷ ಅನುದಾನ ೧೦೦ ಲಕ್ಷ, ನಿವೇಶನ ಖರೀದಿ ಅನುದಾನ ೫೦ ಲಕ್ಷ, ಕೆರೆ ಅಭಿವೃದ್ಧಿಗೆ ೨ ಲಕ್ಷ, ಡೇ ನಲ್ಮ್ ಅನುದಾನ ೫.೫೦ ಲಕ್ಷವನ್ನು ನಿರೀಕ್ಷಿಸಲಾಗಿದೆ.
ಪಟ್ಟಣದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಈಗಾಗಲೇ ೧.೭೫ ಏಕರೆ ಜಾಗ ಮೀಸಲಿರಿಸಲಾಗಿದ್ದು. ಇದರ ಅಭಿವೃದ್ಧಿಗೆ ಕೇವಲ ೨ಲಕ್ಷ ಇಡಲಾಗಿದೆ. ಇದನ್ನು ೨೦ ಲಕ್ಷಕ್ಕೆ ಹೆಚ್ಚಿಸಬೇಕು. ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ನಿವೇಶನ ಖರೀದಿಗೆ ಅಂದಾಜಿಸಿರುವ ಹಣವನ್ನು ಹೆಚ್ಚಿಸಬೇಕೆಂದು ನಾಮನಿರ್ದೇಶಿತ ಸದಸ್ಯ ಎಸ್.ಮಹೇಶ್ ಸಲಹೆ ನೀಡಿದರು.
ಕೆರೆಗಳ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮದಿಂದ ಅನುದಾನ ಪಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಸಭೆಗೆ ತಿಳಿಸಿದರು. ಪಂಚಾಯಿತಿ ಉಪಾಧ್ಯಕ್ಷ ಬಿ. ಸಂಜೀವ ಅವರು ಬಜೆಟ್ ಮಂಡನಾ ಸಭೆಗೆ ಗೈರಾಗಿದ್ದರೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ಮೋಹಿನಿ, ನಾಗರತ್ನ, ಜೀವನ್, ಶುಭಕರ್, ಮೃತ್ಯುಂಜಯ, ಬಿ.ಆರ್. ಮಹೇಶ್, ಬಿ.ಸಿ. ವೆಂಕಟೇಶ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ವೆಂಕಟೇಶ್ ನಾಯಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.