ಗೋಣಿಕೊಪ್ಪಲು, ಮಾ. ೩೦: ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಲ್ಲಿ ಮೃತಪಟ್ಟ ಕೂಲಿ ಕಾರ್ಮಿಕ ಯರವರ ಗಣೇಶ್ ವಾಸಿಸುತ್ತಿದ್ದ ಲೈನ್ ಮನೆಗೆ ಭೇಟಿ ನೀಡಿದ ಪೊನ್ನಂಪೇಟೆ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಡಿ.ಜಿ. ಗುರು ಶಾಂತಪ್ಪ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಅತ್ತೂರು ಸಮೀಪದ ಗದ್ದೆಮನೆ ಬಳಿ ಇರುವ ಗಣೇಶನ ಪತ್ನಿ ಜ್ಯೋತಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ರೂ. ೫ ಸಾವಿರ ನಗದು ಹಣವನ್ನು ನೀಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಲಾಖೆ ವತಿಯಿಂದ ಸಹಕಾರ ಮಾಡುವುದಾಗಿ ಭರವಸೆ ನೀಡಿದರು. ಮಕ್ಕಳ ಕಲಿಕೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸದಂತೆ ಸಲಹೆ ನೀಡಿದರು. ಅಗತ್ಯವಿದ್ದಲ್ಲಿ ಶಾಸಕರ ಗಮನ ಸೆಳೆದು ವಸತಿ ನಿಲಯಗಳಲ್ಲಿ ಪತ್ನಿ ಜ್ಯೋತಿಗೆ ತಾತ್ಕಾಲಿಕ ಉದ್ಯೋಗ ನೀಡುವ ಭರವಸೆ ನೀಡಿದರು.