ಮಡಿಕೇರಿ, ಮಾ. ೩೦: ಮಡಿಕೇರಿ-ಮೂರ್ನಾಡು ರಸ್ತೆಯ ರಮ್ಯ ಸರ್ವಿಸ್ ಸ್ಟೇಷನ್ ಬಳಿ ರಸ್ತೆ ಬದಿಯಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಕಾಡು ಕುರಿಮರಿಯೊಂದನ್ನು ರಕ್ಷಿಸಲಾಗಿದೆ. ಇದೇ ಮಾರ್ಗ ದಲ್ಲಿ ಜಿಲ್ಲಾ ಪಂಚಾಯಿತಿ ನೌಕರ ರೆಹಮಾನ್ ಮತ್ತು ಸ್ನೇಹಿತ ಅಪ್ಪು ಈ ಕುರಿಮರಿಯನ್ನ ಗಮನಿಸಿದ್ದಾರೆ. ಮರಿಯ ಕುತ್ತಿಗೆಗೆ ಗಂಭೀರ ಗಾಯವಾಗಿ ಹುಳು ತುಂಬಿ ದುರ್ವಾಸನೆ ಬರುತ್ತಿತ್ತು. ರೆಹಮಾನ್ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮರಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಕುರಿಮರಿಯನ್ನು ಮರಳಿ ಕಾಡಿಗೆ ಬಿಡಲಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಮರಿಗೆ ಕೆಲವು ದಿನಗಳ ಕಾಲ ಆರೈಕೆ ನೀಡಿ ಬಳಿಕವಷ್ಟೇ ಕಾಡಿಗೆ ಬಿಡಬೇಕಿತ್ತು ಎಂದು ಪ್ರಾಣಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.