ಸುಂಟಿಕೊಪ್ಪ/ಸಿದ್ದಾಪುರ, ಮಾ. ೨೭: ಸುಂಟಿಕೊಪ್ಪದಲ್ಲಿ ಹೊಳೆ ಮೀನನ್ನು ಬೆಸ್ತರು ತಂದು ಸಂತೆ ದಿನವಾದ ಭಾನುವಾರ ರಸ್ತೆ ಬದಿ ಮಾರಾಟ ಮಾಡುತ್ತಿದ್ದರಿಂದ ಜನಜಂಗುಳಿ ಉಂಟಾಗಿ ಟ್ರಾಫಿಕ್ ಜಾಮ್ ಆದ ಪರಿಣಾಮ ಪೊಲೀಸರು ಮೀನು ಮಾರಾಟಗಾರರನ್ನು ಎತ್ತಂಗಡಿ ಮಾಡಿದ ಘಟನೆ ನಡೆಯಿತು.
ಸುಂಟಿಕೊಪ್ಪದ ಆಸ್ಪತ್ರೆ ಪೊಲೀಸ್ ಠಾಣೆಯ ತೆರಳುವ ರಸ್ತೆ ಬದಿಯಲ್ಲಿ ಬೆಸ್ತರು ತರಾವರಿಯ ಮತ್ಸö್ಯವನ್ನು ಮಾರಾಟ ಮಾಡುತ್ತಿದ್ದರು. ಅಸ್ಸಾಂ ಮೂಲದ ಕಾರ್ಮಿಕರು ಮೀನು ಖರೀದಿಸಲು ಪೈಪೋಟಿಗೆ ಬಿದ್ದದವರಂತೆ ನೂಕುನುಗ್ಗಲಿನಲ್ಲಿ ಮೀನು ಖರೀದಿಸಲು ಮುಂದಾದರು. ಇದರಿಂದ ಟ್ರಾಫಿಕ್ ಜಾಮ್ ಆಗಿದೆ. ಪರಿಣಾಮ ವಾಹನ ಸಂಚಾರ ಜನರು ಆಸ್ಪತ್ರೆ ರಸ್ತೆಯಲ್ಲಿ ತಿರುಗಾಡಲು ಹೆಣಗಾಡಬೇಕಾಯಿತು.
ಗ್ರಾಮ ಪಂಚಾಯಿತಿಯ ಪೌರಕಾರ್ಮಿಕರು ಬೆಸ್ತರನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸಿದ್ದರೂ ವ್ಯಾಪಾರಿಗಳು ಕದಲಿಲ್ಲ ಕೊನೆಗೆ ಪೊಲೀಸರು ಬಂದು ಇಲ್ಲಿ ಮೀನು ಮಾರಾಟ ಮಾಡದಂತೆ ಎಚ್ಚರಿಸಿ ಎಲ್ಲಾ ಬೆಸ್ತರನ್ನು ಅಲ್ಲಿಂದ ಎತ್ತಂಗಡಿ ಮಾಡಿದರು. ದೂರದ ಮಾದಾಪುರ ರಸ್ತೆ ಬದಿ ಬಡ ಬೆಸ್ತರು ಹೊಳೆ ಮೀನು ಮಾರಾಟ ಮಾಡಲು ಪರದಾಡುವಂತಾಯಿತು.
ಮಹಶೀರ್ ಮಾರಾಟ
ಅಳಿವಿನಂಚಿನ ಮಹಶೀರ್ ತಳಿಯ ಮೀನು ಬೆಸ್ತರ ಬಲೆ ಸೇರುತ್ತಿದ್ದು, ನೂರಾರು ಮೀನುಗಳ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಸಿದ್ದಾಪುರದ ಅರೆಕಾಡು ಗ್ರಾಮದ ಮಧುರಕೂಪು ಎಂಬಲ್ಲಿ ಹದಿನೈದು ದಿನಗಳಿಂದ ಸುಮಾರು ೩೦ ಬೆಸ್ತರು ಠಿಕಾಣಿ ಹೂಡಿ ಕಾವೇರಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದು, ನೆಲ್ಯಹುದಿಕೇರಿ, ಸಿದ್ದಾಪುರ ಭಾಗದಲ್ಲಿ ಮಾರುತ್ತಿದ್ದಾರೆ ಎಂದು ಎಚ್.ರಶೀರ್ ಕವಿರಾಜ್, ಎನ್.ಬಿ.ಪವಿನ್ ದೂರಿದ್ದಾರೆ. ಮಹಶೀರ್ ಹಿಡಿಯುವುದನ್ನು ಸರ್ಕಾರ ಅಪರಾಧ ಎಂದು ಘೋಷಿಸಿದೆ.
ಸಂಪೂರ್ಣ ಬೆಳೆದ ಮೀನು ಸುಮಾರು ೬೦ ಕೆ.ಜಿ ತೂಕ ಇರುತ್ತದೆ. ದೇಶದ ಈಶಾನ್ಯ ರಾಜ್ಯಗಳಲ್ಲಿ ಮಹಶೀರ್ ಹೆಚ್ಚಾಗಿ ಕಂಡು ಬರುತ್ತಿದ್ದು, ದಕ್ಷಿಣದಲ್ಲಿ ಭಾರತದಲ್ಲಿ ವಿರಳವಾಗಿದೆ. ಪ್ರವಾಹದ ಸಂದರ್ಭ ವಿರುದ್ಧ ದಿಕ್ಕಿನಲ್ಲಿ ಈಜುವ ಸಾಮರ್ಥ್ಯವನ್ನು ಮಹಶೀರ್ ಹೊಂದಿದೆ.
ರಾಜ್ಯದ ಏಕೈಕ ಮಹಶೀರ್ ಮೀನು ತಳಿ ಉತ್ಪಾದನಾ ಕೇಂದ್ರ ಹಾರಂಗಿಯಲ್ಲಿದ್ದು, ಉತ್ಪಾದಿಸಲಾದ ಮರಿಗಳನ್ನು ಪ್ರತಿವರ್ಷ ಕಾವೇರಿ ನದಿ ಭಾಗದಲ್ಲಿ ಬಿಡಲಾಗುತ್ತಿದೆ. ಕೇಂದ್ರದಲ್ಲಿ ಪ್ರತಿ ವರ್ಷವೂ ೩೦-೩೫ ಸಾವಿರ ಮೀನು ಉತ್ಪಾದನೆಯಾಗುತ್ತಿದ್ದು, ಕಾವೇರಿ ನದಿ, ರೈತರ ಕೆರೆ ಹಾಗೂ ಹೊರ ರಾಜ್ಯಕ್ಕೂ ಒದಗಿಸಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಸದ್ಯ ಹಾರಂಗಿ ಕೇಂದ್ರದ ಅಧಿಕಾರಿ ಮಹದೇವ್ ಸ್ಥಳಕ್ಕೆ ಭೇಟಿ ನೀಡಿ ಬೆಸ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಮಹಶೀರ್ ತಳಿಯ ಉತ್ಪಾದನೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಬೆಸ್ತರು ಕಳೆದ ೧೫ ದಿನಗಳಿಂದ ನೂರಾರು ಮಹಶೀರ್ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದು, ಮೀನಿನ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದೇವೆ. ಬಳಿಕ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ನಾವು ಗಾಣ ಹಾಕುವ ಸಂದರ್ಭ ಮಹಶೀರ್ ಸಿಕ್ಕಿದ ಕೂಡಲೇ ನದಿಗೆ ಬಿಡುತ್ತಿದ್ದೇವೆ ಎಂದು ಸಿದ್ದಾಪುರದ ಕವಿರಾಜ್ ಹೇಳುತ್ತಾರೆ.