ಕುಶಾಲನಗರ, ಮಾ. ೨೭: ಕಾವೇರಿ ನದಿ ನಿರ್ವಹಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಕಾಮಗಾರಿಗೆ ಮರು ಟೆಂಡರ್ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಸಂಗ ಕುಶಾಲನಗರದ ಮಾದಾಪಟ್ಟಣ ಬಳಿ ನಡೆಯಿತು.
ಕಾವೇರಿ ನಿಸರ್ಗಧಾಮದ ಬಳಿಯಿಂದ ಮಾದಾಪಟ್ಟಣ, ಗಂಧದಕೋಟೆ, ಬೈಚನಹಳ್ಳಿ ತನಕ ಕಾವೇರಿ ನದಿ ಗಿಡಗಂಟೆಗಳನ್ನು ತೆರವುಗೊಳಿಸುವುದು ಹಾಗೂ ಹೂಳೆತ್ತುವ ಕಾಮಗಾರಿ ೫೦ ಲಕ್ಷ ರೂ.ಗಳಿಗೆ ಅನುಮೋದನೆ ದೊರೆತಿದ್ದು, ಈ ಕಾಮಗಾರಿಯನ್ನು ಅತಿ ಕಡಿಮೆ ಮೊತ್ತಕ್ಕೆ ಗುತ್ತಿಗೆದಾರ ರೊಬ್ಬರು ಟೆಂಡರ್ ಕರೆದಿದ್ದು ಇದರಿಂದ ಯಾವುದೇ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಣಮಟ್ಟದ ಕಾಮಗಾರಿ ನಡೆಸಬೇಕಾದರೆ ಮತ್ತೆ ಮರು ಟೆಂಡರ್ ಕರೆದು ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನದಿಯ ೧.೨ ಕಿಲೋಮೀಟರ್ ಉದ್ದದ ಕಾಮಗಾರಿ ನಡೆಸಬೇಕಾಗಿದ್ದು ಗುತ್ತಿಗೆದಾರ ಟೆಂಡರನ್ನು ಪೈಪೋಟಿಯಲ್ಲಿ ರೂ. ೩೦ ಲಕ್ಷಗಳಿಗೆ ಕರೆದಿದ್ದು, ಇದರಿಂದ ಯಾವುದೇ ರೀತಿಯ ಕೆಲಸ ಸಮರ್ಪಕವಾಗಿ ಮಾಡಲು ಅಸಾಧ್ಯ ಎಂದು ಕಾವೇರಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಶಾಸಕರ ಗಮನಕ್ಕೆ ತಂದಿದ್ದರು.
(ಮೊದಲ ಪುಟದಿಂದ)
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ರೂ. ೫೦ ಲಕ್ಷ ನದಿ ನಿರ್ವಹಣೆ ಕಾಮಗಾರಿಗೆ ಬಿಡುಗಡೆಗೊಳಿಸಲಾಗಿತ್ತು. ಹೊರಜಿಲ್ಲೆಗಳ ಕೆಲವು ಗುತ್ತಿಗೆದಾರರು ಸ್ಥಳೀಯ ಗುತ್ತಿಗೆದಾರರ ಜೊತೆ ಪೈಪೋಟಿಯಲ್ಲಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಅತಿ ಕಡಿಮೆ ದರದ ಮೊತ್ತಕ್ಕೆ ಬಿಡ್ ಕರೆಯುವುದು ಇತ್ತೀಚಿನ ದಿನಗಳ ವಾಡಿಕೆ ಆಗಿದೆ. ಈ ಮೂಲಕ ಕಾಮಗಾರಿ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಮಹೇಂದ್ರಕುಮಾರ್, ಸಿದ್ದರಾಜು, ಕಿರಣ್ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.