ಮಡಿಕೇರಿ, ಮಾ. ೨೭: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ತಾ. ೨೮ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಸುಸೂತ್ರ ಪರೀಕ್ಷಾ ಪ್ರಕ್ರಿಯೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕೊಡಗಿನಲ್ಲಿ ಒಟ್ಟು ೩೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿ ೩,೩೦೬ ಬಾಲಕರು ಹಾಗೂ ೩,೪೧೬ ಬಾಲಕಿಯರು ಸೇರಿ ಒಟ್ಟು ೬,೮೨೨ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿಗಳನ್ನು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರಸಕ್ತ ವರ್ಷ ಹಿಜಾಬ್ ಕುರಿತಾದ ಗೊಂದಲ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೂ ಪರೀಕ್ಷಾ ಕೇಂದ್ರಗಳತ್ತ ಒಂದಷ್ಟು ಹೆಚ್ಚಿನ ನಿಗಾವಹಿಸುತ್ತಿವೆ.
ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಲ್ಲಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಿಲ್ಲ ಎಂಬ ಸೂಚನೆಯನ್ನು ನೀಡಿದೆ. ಈ ಕಾರಣದಿಂದಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಬಂದೋಬಸ್ತ್ ಅನ್ನು ಕಲ್ಪಿಸಲಾಗಿದೆ.