ಮಡಿಕೇರಿ, ಮಾ. ೨೭: ದಾರ್ಶನಿಕರ ಜಯಂತಿಗಳ ಆಚರಣೆ ಕೇವಲ ಆಯಾ ಜಾತಿಗಳಿಗೆ ಸೀಮಿತವಾಗಬಾರದು, ಪ್ರತಿಯೊಂದು ಸಮುದಾಯದವರು ಸೇರಿ ಆಚರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ಮಡಿಕೇರಿ ತಾಲೂಕು ಬಲಿಜ ಸಮಾಜದ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ೨೯೬ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಸಮುದಾಯದವರು ಒಗ್ಗೂಡಿ ದಾರ್ಶನಿಕರ ಜಯಂತಿ ಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳನ್ನು ಅರ್ಥಮಾಡಿಕೊಳ್ಳ ಬೇಕು. ಎಲ್ಲರೂ ಒಗ್ಗೂಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕು. ಈ ರೀತಿಯ ಜಯಂತಿ ಆಚರಣೆಗಳು ಸಮಾಜ ಬಾಂಧವರು ಒಂದು ಕಡೆ ಸೇರಲು ಮತ್ತು ಭಾವನೆ ಗಳನ್ನು ಹಂಚಿಕೊಳ್ಳಲು ಸಹಕಾರಿ ಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸದ್ಗುರು ತಾತಯ್ಯನವರು ಕಾಲಜ್ಞಾನ ರಚನೆಯ ಜೊತೆ ಜೊತೆಯಲ್ಲಿಯೇ ಸಮಾಜಕ್ಕೆ ಉತ್ತಮ ಸಂಸ್ಕಾರವನ್ನು ನೀಡಿದರು. ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಇವರ ಆದರ್ಶಗಳನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳ ಬೇಕೆಂದು ಡಾ.ನಂಜುAಡೇಗೌಡ ಹೇಳಿದರು.
ಬಲಿಜ ಸಮಾಜದ ಪ್ರಮುಖ ಹಾಗೂ ಹಿರಿಯ ಚಿಂತಕ ಟಿ.ಪಿ.ರಮೇಶ್ ಮಾತನಾಡಿ, ಪ್ರಸ್ತುತ ಬಲಿಜ ಸಮಾಜವನ್ನು ‘೩ಎ’ ಯಡಿ ಸರ್ಕಾರ
(ಮೊದಲ ಪುಟದಿಂದ) ಗುರುತಿಸುತ್ತಿದೆ. ಅತ್ಯಂತ ಬಡತನದಲ್ಲಿರುವ ಈ ಸಮಾಜವನ್ನು ‘೨ಎ’ ವ್ಯಾಪ್ತಿಗೆ ಸೇರಿಸಿ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು ೨೦ ಲಕ್ಷ ಮಂದಿ ಬಲಿಜ ಜನಾಂಗದವರಿದ್ದು, ‘೨ಎ’ಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಸರ್ಕಾರ ಬೇಡಿಕೆಯನ್ನು ಪರಿಗಣಿಸಬೇಕು, ಜಾತ್ಯತೀತ ಮನೋಬಾವದ ಬಳೆಗಾರರು ಬಡತನದಲ್ಲೇ ಜೀವನ ಸಾಗಿಸುತ್ತಿದ್ದು, ನೆರವಿನ ಅಗತ್ಯವಿದೆ ಎಂದರು.
ಪವಾಡ ಪುರುಷ ತಾತಯ್ಯ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಹೋಗಿದ್ದು, ಯುವ ಪೀಳಿಗೆಗೆ ಅರ್ಥೈಸುವ ಕೆಲಸವಾಗಬೇಕು. ಮಾನವರೆಲ್ಲಾ ಒಂದೇ, ಮೊದಲು ಮನುಷ್ಯರಾಗಿ ಬಾಳೋಣ ಎಂದು ದಾರ್ಶನಿಕರು ಹೇಳಿದ್ದಾರೆ. ಇದನ್ನು ನಾವು ಪಾಲಿಸಬೇಕು ಎಂದು ತಿಳಿಸಿದ ರಮೇಶ್, ತಾತಯ್ಯನವರ ೩೦೦ನೇ ಜಯಂತ್ಯೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ತಿಳಿಸಿದರು.
ತಾತಯ್ಯ ಜಯಂತಿ ಆಚರಣೆ ಬಗ್ಗೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಲು ವಿಳಂಬ ಮಾಡಿದೆ. ಇಲ್ಲದಿದ್ದಲ್ಲಿ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬಹುದಾಗಿತ್ತು. ಮುಂದಿನ ವರ್ಷಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಮಾತನಾಡಿ ಇಲಾಖೆ ಮೂಲಕ ಪ್ರತಿವರ್ಷ ೨೯ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಜಯಂತಿಗಳು ಜಾತಿಗೆ ಸೀಮಿತವಾಗಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಬಲಿಜ ಸಮಾಜದ ಅಧ್ಯಕ್ಷೆ ಮೀನಾಕ್ಷಿ ಕೇಶವ ಬಲಿಜ ಸಮಾಜವನ್ನು ಸರ್ಕಾರ ‘೨ಎ’ ವ್ಯಾಪ್ತಿಗೆ ಸೇರಿಸಿದರೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ತಾತಯ್ಯ ಅವರ ಜನ್ಮ ದಿನಾಚರಣೆಯನ್ನು ತಾಲೂಕು ಮಟ್ಟಕ್ಕೆ ಸೀಮಿತಗೊಳಿಸದೆ ಜಿಲ್ಲಾ ಮಟ್ಟದಲ್ಲಿ ಆಚರಿಸಬೇಕೆಂದರು. ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಕುರಿತು ಶಿಕ್ಷಕಿ ಟಿ.ಎಲ್. ಸುಮಾ ಅರಿವು ಮೂಡಿಸಿದರು. ಟಿ.ಎಸ್. ಐಶ್ವರ್ಯ ಪ್ರಾರ್ಥಿಸಿ, ಸಮಾಜದ ಅಧ್ಯಕ್ಷೆ ಮೀನಾಕ್ಷಿ ಕೇಶವ ಸ್ವಾಗತಿಸಿ, ಕಾರ್ಯದರ್ಶಿ ಟಿ.ವಿ. ಲೋಕೇಶ್ ವಂದಿಸಿದರು. ನಾಪೋಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಬಾರ ಮುಖ್ಯ ಶಿಕ್ಷಕ ಟಿ.ಆರ್. ಸುಬ್ರಮಣಿ ನಿರೂಪಿಸಿದರು.
ಸಂಬಾರ ಮಂಡಳಿಯ ನಿವೃತ್ತ ಅಧಿಕಾರಿ ತೋಟಪನಿ, ನಗರಸಭಾ ಮಾಜಿ ಸದಸ್ಯ ಟಿ.ಹೆಚ್. ಉದಯಕುಮಾರ್, ಸಮಾಜದ ಸಂಘಟನಾ ಕಾರ್ಯದರ್ಶಿ ನಾಗೇಶ್ ನಾಯ್ಡು, ನಿರ್ದೇಶಕರುಗಳಾದ ಟಿ.ಎಸ್. ವೆಂಕಟೇಶ್, ಪದ್ಮಾವತಿ ಮನುಕುಮಾರ್, ಟಿ.ವಿ. ಸಂಜಯ್, ಟಿ.ಆರ್. ಯಶವಂತ್, ಎಸ್.ಆರ್. ಜ್ಯೋತಿ ಸುಬ್ರಮಣಿ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಯೋಜನಾಧಿಕಾರಿ ಟಿ.ಎನ್. ಪ್ರವೀಣ್, ವಾರ್ತಾ ಇಲಾಖೆಯ ಅಧಿಕಾರಿ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಹಾಗೂ ಬಲಿಜ ಸಮಾಜದ ಬಂಧುಗಳು ಉಪಸ್ಥಿತರಿದ್ದರು. ನೆರೆದಿದ್ದವರು ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು