ವೀರಾಜಪೇಟೆ, ಮಾ. ೨೭: ಜೀವ ನದಿ ಕಾವೇರಿಗೆ ಕಿಡಿಗೇಡಿಗಳು ಗೋವನ್ನು ಹತ್ಯೆಗೈದು ಗೋವಿನ ಮಾಂಸ ಮತ್ತು ತ್ಯಾಜ್ಯಗಳನ್ನು ಎಸೆದಿರುವುದು ಖಂಡನೀಯ ಎಂದು ಭಜರಂಗದಳ ದ. ಪ್ರಾಂತ ಸಹ ಸಂಯೋಜಕರಾದ ಮುರುಳಿಕೃಷ್ಣ ಹಂಸತಡ್ಕ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಕರೆಯಲಾಗಿದ್ದ sಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋಹತ್ಯೆ, ಗೋ ಸಾಗಾಟ,ಮಾರಾಟ ಮಾಡುತ್ತಿರುವ ಘಟನೆಗಳು ಮರು ಕಳಿಸುತ್ತಿರುವುದು ಖಂಡನಾರ್ಹ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಗೋವಿನ ಸಂರಕ್ಷಣೆ ಮಾಡುವಲ್ಲಿ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ವಿಫಲವಾಗಿ ರುವುದು ವಿಷಾದನೀಯ ಎಂದರು.
ಕೊಡಗಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಪ್ರಕರಣಗಳು ದಾಖಲಾಗುತ್ತಿವೆ. ಗಾಂಜಾ ವ್ಯಸನಿಗಳಿಂದಾಗಿ ಸಮಾಜ ಘಾತುಕ ಘಟನೆಗಳಿಗೆ ಯುವಕರು ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಗಾಂಜಾ ಬಳಕೆ ಹತ್ತಿಕ್ಕುವ ಸಲುವಾಗಿ ಆರಕ್ಷಕ ಇಲಾಖೆಯು ಗಾಂಜಾ ಬಳಕೆ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾವೇರಿ ನದಿಗೆ ಗೋವಿನ ಮಾಂಸ ಮತ್ತು ತ್ಯಾಜ್ಯ ಎಸೆದಿರುವ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೇ ಮುಂದಿನ ತಿಂಗಳು ವೀರಾಜಪೇಟೆ ನಗರದಲ್ಲಿ ನಡೆಯುವ ಹಿಂದೂ ಜನ ಜಾಗೃತಿ ಸಭೆಯು, ಪ್ರತಿಭಟನಾ ಸಭೆಯಾಗಿ ಮಾರ್ಪಾಡಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಿ.ಎಂ. ಕುಮಾರ್, ಭಜರಂಗದಳ ಜಿಲ್ಲಾ ಸಹ ಸಂಚಾಲಕ ವಿವೇಕ್ ರೈ,ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಯತೀಶ್, ಪ್ರಮುಖರಾದ ಪೊನ್ನಪ್ಪ ರೈ ಹಾಜರಿದ್ದರು.