ಕೂಡಿಗೆ, ಮಾ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ವಾರ್ಷಿಕೋತ್ಸವದ ಅಂಗವಾಗಿ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ೨೦೨೨ ಕಾರ್ಯಕ್ರಮ ಹುದುಗೂರು ಗ್ರಾಮದ ಕ್ರೀಡಾಂಗಣದಲ್ಲಿ ನಡೆಯಿತು.
ವಾಲಿಬಾಲ್, ಪಂದ್ಯಾವಳಿಯಲ್ಲಿ ಆರ್ಮಿ ಬಾಯ್ಸ್ ತಂಡ ಪ್ರಥಮ, ಕೂಡಿಗೆ ತಂಡ ದ್ವಿತೀಯ, ಕಬಡ್ಡಿ ಪಂದ್ಯಾಟದಲ್ಲಿ ಹುದುಗೂರು ಉಮಾಮಹೇಶ್ವರ ತಂಡ ಪ್ರಥಮ, ದ್ವಿತೀಯ ಸ್ಥಾನವನ್ನು ಬ್ಯಾಡಗೊಟ್ಟ ಗ್ರಾಮದ ಅಣ್ಣಯ್ಯ ಫ್ರೆಂಡ್ಸ್ ತಂಡ ಪಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಯಡವನಾಡು ತಂಡ ಪ್ರಥಮ, ಹುದುಗೂರು ತಂಡ ದ್ವಿತೀಯ ಸ್ಥಾನವನ್ನು ಗಳಿಸಿದವು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳು ನಡೆದವು.
ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಶರತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಪೀರ್ ಮಹಮ್ಮದ್, ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಮಾಜಿ ಅಧ್ಯಕ್ಷ ಕುಮಾರಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹೆಚ್.ಎಸ್. ರವಿ, ರತ್ನಮ್ಮ, ಸಂಘದ ಕಾರ್ಯದರ್ಶಿ ನೌಷದ್, ಸದಸ್ಯರಾದ ವೇದಂತ್, ಕುಮಾರ್, ಕಾರ್ತಿಕ್, ವಿಕ್ರಮ, ಚೇತನ, ಗಿರೀಶ್ ಪ್ರವೀಣ್ ಹಾಜರಿದ್ದರು.
ಈ ಸಂದರ್ಭ ನಿವೃತ್ತ ಸೈನಿಕ ಆರ್.ಎಂ. ಜಗದೀಶ್ ಮತ್ತು ಎನ್‌ಸಿಸಿ ಮುಖ್ಯಮಂತ್ರಿ ಪದಕ ವಿಜೇತೆ ಟಿ.ಸಿ. ನೀತಿ ಮತ್ತು ಯಶವಂತ್ ಕುಮಾರ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.