ಸಿದ್ದಾಪುರ, ಮಾ. ೨೬: ಕಾರ್ಮಿಕನೋರ್ವ ಮರದ ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ಕೆ.ಎ ನಂಜಪ್ಪ ಎಂಬವರಿಗೆ ಸೇರಿದ ಟೀಕ್‌ವುಡ್ ಕಾಫಿ ತೋಟದಲ್ಲಿ ಮರದ ಕೊಂಬೆಗಳನ್ನು ಕಡಿಯುತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ರಮೇಶ (೨೮) ಎಂಬಾತ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ರಮೇಶ ಮೂಲತಃ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಗ್ರಾಮದ ಕಾಲೋನಿ ನಿವಾಸಿಯಾಗಿದ್ದಾನೆ.

ಮರದ ಮೇಲಿನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ಹಾಗೂ ಶರೀರಕ್ಕೆ ಗಂಭೀರ ಗಾಯವಾಗಿ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ರಮೇಶ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ.