ಮಡಿಕೇರಿ, ಮಾ.೨೬ : ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಶ್ರೀ ತಪೋಕ್ಷೇತ್ರ ಮನೆಹಳ್ಳಿಯಲ್ಲಿ ನಡೆದ ಸಾವಯವ ಕೃಷಿ, ಕುಲ ಗೋವುಗಳ ಸಮ್ಮೇಳನದ ಸಂದರ್ಭ ಮುಸಲ್ಮಾನರ ವ್ಯಾಪಾರಕ್ಕೆ ಬಜರಂಗದಳÀ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷ ಖಲೀಲ್ ಬಾಷ ವ್ಯಾಪಾರಕ್ಕೆ ಅವಕಾಶ ನೀಡದೆ ಅಂಗಡಿಗಳನ್ನು ತೆರವುಗೊಳಿಸಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಯೊಂದು ಧರ್ಮದವರಿಗೆ ವ್ಯಾಪಾರ ಮಾಡುವ ಹಕ್ಕನ್ನು ದೇಶದ ಸಂವಿಧಾನ ಕಲ್ಪಿಸಿಕೊಟ್ಟಿದೆ. ಆದರೆ ಮುಸಲ್ಮಾನ ಎಂಬ ಒಂದೇ ಕಾರಣಕ್ಕೆ ಹೊಟ್ಟೆಪಾಡಿಗಾಗಿ ಇಟ್ಟಿದ್ದ ಅಂಗಡಿಯನ್ನು ತೆರವುಗೊಳಿಸಿ ತೊಂದರೆ ನೀಡಲಾಗಿದೆ. ಅಂಗಡಿಗಳನ್ನು ತೆರವುಗೊಳಿಸುವ ಸಂದರ್ಭ ಪೊಲೀಸ್ ವಾಹನ ಹಾಗೂ ಪೊಲೀಸರು ಸ್ಥಳದಲ್ಲೇ ಇದ್ದರೂ ರಕ್ಷಣೆಯನ್ನು ನೀಡಿಲ್ಲ ಎಂದು ಆರೋಪಿಸಿರುವ ಅವರು, ಶಾಂತಿಯುತವಾಗಿರುವ ಕೊಡಗಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.