ಗೋಣಿಕೊಪ್ಪಲು, ಮಾ. ೨೬: ಇಲ್ಲಿನ ಸುಂದರ ಪರಿಸರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದು, ಶಿಕ್ಷಣ ನೀಡಿದ ಶಿಕ್ಷಕರಿಗೆ ಋಣಿಯಾಗಿರಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅಭಿಮತ ವ್ಯಕ್ತಪಡಿಸಿದರು. ಗೋಣಿಕೊಪ್ಪಲುವಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ಸುಂದರ ಪರಿಸರದಲ್ಲಿ ಉತ್ತಮ ಶಿಕ್ಷಕರಿಂದ ಶಿಕ್ಷಣವನ್ನು ಪಡೆಯುವ ಅವಕಾಶ ಲಭಿಸಿದೆ. ಉತ್ತಮ ಮಾರ್ಗದರ್ಶನ ದೊಂದಿಗೆ ತಮ್ಮ ಹಾದಿಗಳು ಸುಗಮವಾಗಲಿದೆ. ಆದರೆ ಸಮಾಜದಲ್ಲಿ ಹಲವು ಮಂದಿಗೆ ವಿದ್ಯಾಭ್ಯಾಸ ಮಾಡುವ ಅವಕಾಶವೇ ಲಭಿಸುವುದಿಲ್ಲ ಇದಕ್ಕೆ ಬಡತನ ಸೇರಿದಂತೆ ಇನ್ನಿತರ ಕಾರಣಗಳಿರ ಬಹುದು. ಅವಕಾಶಗಳು ಬಂದಾಗ ಅದನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸಿ.ಕೆ.ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೃಷಿ ಅಧಿಕಾರಿ ರಾಮ್‌ಕುಮಾರ್ ಮರ್ನಾಡ್ ಬದುಕಿನಲ್ಲಿ ಹಲವಾರು ಅವಕಾಶಗಳು ಎದುರಾದಾಗ ಅದನ್ನು ನ್ಯಾಯಾಯುತವಾಗಿ ಬಳಕೆ ಮಾಡಿಕೊಳ್ಳಬೇಕು, ತಂದೆ ತಾಯಂದಿರಲ್ಲಿ ಭಗವಂತನನ್ನು ಕಾಣಬಹುದು.

(ಮೊದಲ ಪುಟದಿಂದ) ಶಿಕ್ಷಣ ಕೊಟ್ಟ ಶಿಕ್ಷಕರನ್ನು ಎಂದಿಗೂ ಮರೆಯದಿರಿ ನೈತಿಕ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಲೋಪಮುದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಮೃತ್ ನಾಣಯ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ಜವಬ್ದಾರಿ ಹಾಗೂ ಗುರಿಗಳು ಇದ್ದಲ್ಲಿ ಸಾಧನೆ ಮಾಡಬಹುದು. ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮತ್ತೊಬ್ಬರ ಬಗ್ಗೆ ಆರೋಪ ಮಾಡುವುದನ್ನು ಬಿಡಬೇಕು. ಸಾಧನೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕಾವೇರಿ ಕಾಲೇಜಿನ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಬಿ. ಕಾವೇರಪ್ಪ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಬಿ.ಆರ್.ಸಚಿನ್, ಪ್ರಜ್ಞಾ ಎಂ.ಹೆಚ್., ಕೀರ್ತಿ ಎಸ್. ಆದಿತ್ಯ ಕೆ. ಸೇರಿದಂತೆ ಶಿಕ್ಷಕಿ ಕುಸುಂ ಉಪಸ್ಥಿತರಿದ್ದರು. ಕೋವಿಡ್ ಸಂದರ್ಭದಲ್ಲಿ ಉಚಿತ ಸೇವೆ ನೀಡುವ ಮೂಲಕ ನಾಗರಿಕರಿಗೆ ಸಹಕಾರ ನೀಡಿದ ಸವಿನೆನಪಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಲೋಪಮುದ್ರ ಆಸ್ಪತ್ರೆಯ ಮುಖ್ಯಸ್ಥ ಡಾ.ಅಮೃತ್ ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳನ್ನು ಸಾಂಪ್ರದಾಯಿಕ ದುಡಿಕೊಟ್ಟ್ ಮೂಲಕ ಬರಮಾಡಿಕೊಳ್ಳಲಾಯಿತು. ಅತಿಥಿಗಳು ಮಾತೆ ಕಾವೇರಿ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರು ಸೇರಿದಂತೆ ಶಿಕ್ಷಕವೃಂದ ಉಪಸ್ಥಿತರಿದ್ದರು. ದಿಲನ್‌ಕುಮಾರ್ ತಂಡ ಪ್ರಾರ್ಥಿಸಿದರು. ಶಿಕ್ಷಕಿ ಪೂವಮ್ಮ ನಿರೂಪಿಸಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಣ್ಣುವಂಡ ಎಸ್.ಮಾದಯ್ಯ ಸ್ವಾಗತಿಸಿದರು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕುಸುಂ ವಂದಿಸಿದರು.