ಸೋಮವಾರಪೇಟೆ, ಮಾ. ೨೬: ರೋಟರಿ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ನಿಸ್ವಾರ್ಥತೆಯ ಸೇವಾ ಮನೋಭಾವ ರೋಟರಿ ಸದಸ್ಯರಲ್ಲಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅಭಿಪ್ರಾಯಿಸಿದರು.
ರೋಟರಿ ಸಂಸ್ಥೆಯ ವತಿಯಿಂದ ಕೈಗೊಳ್ಳಲಾಗಿರುವ ಸಮಾಜಮುಖಿ ಕಾರ್ಯಗಳು, ಸಾಮಾಜಿಕ ಕಳಕಳಿಯ ಧ್ಯೇಯೋದ್ದೇಶಗಳು, ಸಾಮಾಜಿಕ ವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಮಿಸಿದ ಪ್ರಚಾರ ರಥವನ್ನು ಸೋಮವಾರಪೇಟೆಯಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ರೋಟರಿ ಸಂಸ್ಥೆ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಭೂಕುಸಿತ ಸಂದರ್ಭ ರೋಟರಿ ಸಂಸ್ಥೆಯು ಜನರ ನೆರವಿಗೆ ಧಾವಿಸಿದೆ. ಕೊರೊನಾ ಸಂದರ್ಭದಲ್ಲೂ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಶ್ರಮವಹಿಸಿದೆ ಎಂದರು.
ಸೋಮವಾರಪೇಟೆಯ ಸಾರ್ವಜನಿಕ ಸ್ಮಶಾನಕ್ಕೆ ಜಾಗದ ಸಮಸ್ಯೆ ಇದ್ದ ಸಂದರ್ಭ ಕಂದಾಯ ಇಲಾಖೆ ಮೂಲಕ ಸರ್ವೆ ನಡೆಸಿ ನಿವೇಶನ ಗುರುತಿಸಲಾಗಿದೆ. ಈ ಸ್ಥಳದಲ್ಲಿ ರೋಟರಿ ಸಂಸ್ಥೆಯವರು ಸಿಲಿಕಾನ್ ಚೇಂಬರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಸಂಯೋಜಕ ಸತೀಶ್ ಬೋಳಾರ್ ಮಾತನಾಡಿ, ನಿಸ್ವಾರ್ಥ ಸೇವೆಯಿಂದ ಮಾತ್ರ ಆತ್ಮತೃಪ್ತಿ ಲಭಿಸುತ್ತದೆ. ರೋಟರಿ ಸದಸ್ಯರು ಇಡೀ ಸಮಾಜವನ್ನೇ ತನ್ನ ಕುಟುಂಬವೆAದು ಭಾವಿಸಿ ಸೇವೆಯಲ್ಲಿ ತೊಡಗಿದ್ದಾರೆ. ಪೋಲಿಯೋ ಮುಕ್ತ ಭಾರತ ಮಾಡುವಲ್ಲಿ ಸಂಸ್ಥೆಯ ಪಾತ್ರ ಹಿರಿದು. ಇಂದಿಗೂ ಲಸಿಕಾ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಥಯಾತ್ರೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ರೋಟರಿ ಅಧ್ಯಕ್ಷ ಪ್ರಕಾಶ್ಕುಮಾರ್, ಕಾರ್ಯದರ್ಶಿ ಧರ್ಮಪ್ಪ, ಮಾಜಿ ಅಧ್ಯಕ್ಷ ಪಿ.ಕೆ. ರವಿ, ಹೆಚ್.ಸಿ. ನಾಗೇಶ್, ಗೋಣಿಕೊಪ್ಪದ ಚಂದ್ರಶೇಖರ್ ಸೇರಿದಂತೆ ಸಂತ ಜೋಸೆಫರ ಕಾಲೇಜು ರೋರ್ಯಾಕ್ಟ್ ವಿದ್ಯಾರ್ಥಿಗಳು, ರೋಟರಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.