ಉ.ರಾ. ನಾಗೇಶ್ ಆಶಯ

ಕುಶಾಲನಗರ, ಮಾ. ೨೬: ಭಾಷೆ, ಬರಹ, ಬಣ್ಣ ಹಾಗೂ ಭಾವನೆಗಳು ಸಾಹಿತ್ಯ ಕೃಷಿಗೆ ದಾರಿದೀಪವಾಗಿವೆ. ಒಂದು ವೇಳೆ ಇವುಗಳು ನಶಿಸಿದರೆ ಮಾನವನ ಬದುಕು ಅವನತಿಯತ್ತ ಸಾಗುತ್ತದೆ ಎಂದು ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಹೇಳಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವ ಕಾವ್ಯ ದಿನದ ಅಂಗವಾಗಿ ಪಟ್ಟಣದ ಬಸವೇಶ್ವರ ಬಡಾವಣೆಯ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾವ್ಯಗಳ ರಚನೆ ಕುರಿತು ಪ್ರವಚನ ನೀಡಿದ ಅವರು, ಯಾವುದೇ ಒಂದು ಭಾಷೆ ಬರಹದ ರೂಪದಲ್ಲಿ ಹೊರಬಂದು ವೃಕ್ಷದ ಬೇರಾಗಿ ನಿಲ್ಲುವ ಮೂಲಕ ಹೆಮ್ಮರವಾಗಿ ಬೆಳೆದು ಕಾವ್ಯ ಪ್ರಪಂಚವಾಗಬೇಕು ಎಂದು ನಾಗೇಶ್ ಹೇಳಿದರು.

ಕೊಡಗಿನ ಸುಂದರ ಪ್ರಕೃತಿ ಹಾಗೂ ಪರಿಸರದ ಕುರಿತು ಮಾತನಾಡಿದ ಉ.ರಾ.ನಾಗೇಶ್, ಕೊಡಗು ನಿಸರ್ಗ ನಿರ್ಮಿತ ಜಿಲ್ಲೆ. ಇಲ್ಲಿಯ ಪರಿಸರ, ಬೆಟ್ಟ-ಗುಡ್ಡ, ನದಿ, ತೊರೆ, ಹಳ್ಳ-ಕೊಳ್ಳಗಳು ಕವಿಯನ್ನು ಕೂಗಿ ಕರೆದು ತಮ್ಮನ್ನು ತಾವು ಕಾವ್ಯ ಪ್ರಪಂಚಕ್ಕೆ ತೆರೆದುಕೊಳ್ಳುತ್ತವೆ ಎಂದು ವಿಶ್ಲೇಷಿಸಿದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಆಧುನಿಕತೆಯ ಪ್ರಭಾವದಿಂದಾಗಿ ಕಾವ್ಯ ಪ್ರಪಂಚ ಮೂಲ ಸಂವೇದನೆ ಕಳೆದುಕೊಳ್ಳಬಾರದು. ಪರಿಸರವನ್ನು ಪ್ರೀತಿಸುವ ಮತ್ತು ನಿಸರ್ಗದ ಜೊತೆಗೆಯೇ ಬದುಕುವ ಮೂಲಕ ಸಾಹಿತ್ಯ ಕೃಷಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಮೊಬೈಲ್ ಗೀಳು ಬಿಟ್ಟು ಪುಸ್ತಕಗಳನ್ನು ಓದುವಂತೆ ವಿದ್ಯಾರ್ಥಿಗಳಿಗೆ ಪ್ರಕಾಶ್ ಕರೆಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಕಾವ್ಯ ಎಂದರೆ ಆಕರ್ಷಕ ಪದಪುಂಜವಲ್ಲ. ಅದು ಕವಿಯ ನೈಜ ಭಾವನೆಯಾಗುವ ಮೂಲಕ ಓದುಗರ ಮನವನ್ನು ತಟ್ಟುತ್ತದೆ. ಓದುಗರು ಮತ್ತು ಕವಿಯೊಂದಿಗಿನ ಭಾವ ಬೆಸುಗೆಯನ್ನು ಅದು ಮೂಡಿಸುತ್ತದೆ ಎಂದರು.

ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ವಸತಿ ನಿಲಯದ ಮೇಲ್ವಿಚಾರಕ ಶ್ರೀಕಾಂತ್, ಪರಿಷತ್ತಿನ ಗೌರವ ಕಾರ್ಯದರ್ಶಿ ಗಳಾದ ಎಸ್.ನಾಗರಾಜು, ಮಂಜು ಭಾರ್ಗವಿ, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕರಾದ ಸೂದನ ರತ್ನಾವತಿ, ಲೀಲಾಕುಮಾರಿ ತೊಡಿಕಾನ, ಟಿ.ವಿ. ಶೈಲಾ, ಮೇಲ್ಮನೆ ಕಾಳಪ್ಪ, ಅಂಬಿಕಾ ರಾವ್ ಹಾಗೂ ವಿಶಾಲಾಕ್ಷಿ ಇದ್ದರು.

ವಿದ್ಯಾರ್ಥಿನಿ ಶಿವಾನಿ ಸ್ವಾಗತಿಸಿದರು. ರಶ್ಮಿ ಹಾಗೂ ರಮ್ಯ ನಿರೂಪಿಸಿದರು. ಪ್ರೀತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಪರಿಚಯ ನಡೆಸಿಕೊಟ್ಟರು. ತನುಶ್ರೀ ತಂಡ ನಾಡಗೀತೆ ಪ್ರಸ್ತುತಪಡಿಸಿದರು. ನೃತ್ಯ ಕಲಾವಿದೆ ಮಂಜು ಭಾರ್ಗವಿ ಅವರಿಂದ ನೃತ್ಯವೈಭವ ಮೂಡಿ ಬಂತು. ಮಿಂಚು ವಂದಿಸಿದರು.