ಕುಶಾಲನಗರ, ಮಾ. ೨೫: ಕುಶಾಲನಗರ ಪಟ್ಟಣ ಪಂಚಾಯಿತಿ ಕುರಿ, ಕೋಳಿ, ಹಸಿಮೀನು ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ವ್ಯಾಪಾರಿಗಳು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಮುಂದೂಡಲಾಯಿತು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಟ್ಟು ೧೬ ಕುರಿ, ಕೋಳಿ, ಹಸಿಮೀನು ಮಳಿಗೆಗಳನ್ನು ೨೦೨೨-೨೩ರ ಸಾಲಿನ ಮಾರಾಟದ ಹಕ್ಕು ನೀಡುವ ಬಗ್ಗೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಬಿ. ಜಯವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಬೆರಳೆಣಿಕೆಯ ಬಿಡ್‌ದಾರರು ಮಾತ್ರ ಭಾಗವಹಿಸಿದ್ದು, ೧೬ ಅಂಗಡಿಗಳ ಪೈಕಿ ಮೂರು ಕುರಿ ಮಾಂಸದ ಮಳಿಗೆ ಮತ್ತು ಒಂದು ಹಸಿಮೀನು ಮಳಿಗೆ ಮಾತ್ರ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಡ್ ನಡೆಯಿತು.

ಕಳೆದ ಬಾರಿಯ ಹರಾಜು ಮೊತ್ತಕ್ಕಿಂತ ಕೇವಲ ಶೇ. ೧೦ ರಷ್ಟು ಜಾಸ್ತಿ ಮೊತ್ತಕ್ಕೆ ಹರಾಜು ಆಗಿದ್ದು, ಇನ್ನೂ ೧೨ ಮಳಿಗೆಗಳು ಹರಾಜು ನಡೆಯದೆ ತಾ. ೨೮ಕ್ಕೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಬಗ್ಗೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ವ್ಯಾಪಾರ ಉದ್ಯಮ ಕುಸಿತ ಉಂಟಾಗಿದ್ದು ವ್ಯಾಪಾರಸ್ಥರು ಈ ಬಾರಿ ಹರಾಜಿನಲ್ಲಿ ಪಾಲ್ಗೊಳ್ಳದಿರಲು ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಾ. ೨೮ ರಂದು ಮರು ಹರಾಜು ನಡೆಸಲಾಗುವುದು ಎಂದು ತಿಳಿಸಿದರು. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಉಪಾಧ್ಯಕ್ಷರಾದ ಸುರಯಾ ಬಾನು, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಶೇಕ್ ಕಲಿಮುಲ್ಲ, ಜಯಲಕ್ಷö್ಮಮ್ಮ, ಕೆ.ಜಿ. ಮನು, ಪಂಚಾಯಿತಿ ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಸಿಬ್ಬಂದಿಗಳು ಇದ್ದರು.