ಪೊನ್ನAಪೇಟೆ, ಮಾ. ೨೫: ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಬೋಧಕರು ಸದಾ ಮಹತ್ತರ ಪಾತ್ರ ವಹಿಸುತ್ತಾರೆ ಎಂದು ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಆಳಮೆಂಗಡ ಬೋಸ್ ಮಂದಣ್ಣ ಹೇಳಿದರು.

ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಇತ್ತೀಚಿಗೆ ನಿವೃತ್ತರಾದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಜೆ. ಸೋಮಣ್ಣ ಅವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಾಳೆಲೆ ಕಾಲೇಜಿನಲ್ಲಿ ಕಳೆದ ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸೋಮಣ್ಣ ಅವರು ಉತ್ತಮ ಬೋಧಕರಾಗಿದ್ದರಲ್ಲದೆ, ಜಿಲ್ಲೆಯ ಉತ್ತಮ ಸಾಹಿತಿಗಳೆಂದು ಕರೆಸಿಕೊಂಡಿರುವುದು ಅಭಿಮಾನಕರ ಸಂಗತಿಯಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಚಿಮ್ಮಣ್ಣಮಾಡ ಕೃಷ್ಣ ಗಣಪತಿ ಮಾತನಾಡಿ, ಉತ್ತಮ ಬೋಧಕರಾಗಿದ್ದ ಡಾ. ಜೆ. ಸೋಮಣ್ಣ ಅವರು ಕನ್ನಡನಾಡಿನ ಲೇಖಕರಾಗಿಯೂ ರಾಜ್ಯಮಟ್ಟದಲ್ಲಿ ಬಾಳೆಲೆಗೆ ಮತ್ತು ವಿದ್ಯಾಸಂಸ್ಥೆಗೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಡಾ. ಜೆ. ಸೋಮಣ್ಣ, ತಮಗೆ ಬದುಕು ಕಟ್ಟಿಕೊಟ್ಟ ಬಾಳೆಲೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೆ ವಿದ್ಯಾಸಂಸ್ಥೆಯ ಶೈಕ್ಷಣಿಕತೆಗೆ ಪೂರಕವಾದ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಮುಕ್ತ ಅವಕಾಶ ಕಲ್ಪಿಸಿದ ಆಡಳಿತ ಮಂಡಳಿಗೆ ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಪ್ರಮುಖರು ಡಾ. ಜೆ. ಸೋಮಣ್ಣ ಅವರ ಸೇವಾವಧಿಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೋಡಮಾಡ ಸುಖೇಶ್, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚೆಕ್ಕೇರ ಸೂರ್ಯ, ಬಾಳೆಲೆ ಪ್ರತಿಭಾ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಅಡ್ಡೆಂಗಡ ಪೊನ್ನಮ್ಮ, ಕಾಫಿ ಬೆಳೆಗಾರ ಮೇಚಂಡ ಸಾಬು ಮಂದಣ್ಣ, ನಿವೃತ್ತ ಸೈನಿಕರಾದ ಕೋಲತಂಡ ಕುಟ್ಟಪ್ಪ, ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಕೆ. ಪ್ರಭು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಕೆ. ಚಂದ್ರಶೇಖರ್, ಕಾಲೇಜು ಆಡಳಿತ ಮಂಡಳಿ ಖಜಾಂಚಿ ಅಡ್ಡೆಂಗಡ ದೇವಯ್ಯ, ಸಹ ಖಜಾಂಚಿ ಆಲೆಮಾಡ ಕರುಂಬಯ್ಯ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಸದಸ್ಯರಾದ ಆದೇಂಗಡ ವಿನು ಉತ್ತಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೆಂಗಡ ಸುರೇಶ್, ಬಿ.ಎನ್. ಕೇಶವಮೂರ್ತಿ, ಅಡ್ಡೆಂಗಡ ಅರುಣ, ಅಡ್ಡೆಂಗಡ ಸಜ್ಜನ್ ಮೊದಲಾದವರು ಉಪಸ್ಥಿತರಿದ್ದರು. ಬಾಳೆಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರಾದ ಪಿ.ಎ. ಪ್ರಭುಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ, ಸುಬ್ಬಯ್ಯ ವಂದಿಸಿದರು.