ಚೆಟ್ಟಳ್ಳಿ, ಮಾ. ೨೫: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಕಾವೇರಿ ಮಾತೆಯ ಹೆಸರಿನಲ್ಲಿ ಕೊಡವ ಹಾಗೂ ಗೌಡ ಜನಾಂಗದವರ ನಡುವೆ ಬಿರುಕು ಮೂಡಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಬೇಸರದ ವಿಚಾರ.
ಕೊಡವ ಹಾಗೂ ಗೌಡ ಎಂಬ ಭೇದ ಭಾವವಿಲ್ಲದೇ ನಾವೆಲ್ಲರೂ ಭಾರತ ದೇಶದ ಮಣ್ಣಿನ ಮಕ್ಕಳಾಗಿ ಬಾಳಿದರೆ ಮಾತ್ರ ಕೊಡಗಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪನವರು ಅಭಿಪ್ರಾಯಪಟ್ಟರು.
ಚೇರಳ ಗೌಡ ಸಂಘ, ಯುವ ಬ್ರಿಗೇಡ್ ಸಮಿತಿ ಚೆಟ್ಟಳ್ಳಿ ಇವರ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಕಾಲ್ಚೆಂಡು ಪಂದ್ಯಾಟದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಕಾವೇರಿ ತಾಯಿಯ ತವರು ಕೊಡಗು ಜಿಲ್ಲೆ. ಜಿಲ್ಲೆಯ ಮೂಲ ಸಂಸ್ಕೃತಿ ಇತ್ತೀಚಿನ ಕಾಲದಲ್ಲಿ ನಶಿಸಿ ಹೋಗುತ್ತಿರುವುದು ಬೇಸರದ ವಿಷಯವಾಗಿದೆ. ಈ ಮಧ್ಯೆ ಕೊಡವ, ಗೌಡ ಎಂಬ ತಾರತಮ್ಯವನ್ನು ಕೆಲವರು ಸಾಮಾಜಿಕ ಜಾಲತಾಣ ಗಳಲ್ಲಿ ಸೃಷ್ಟಿಸುತ್ತಿದ್ದಾರೆ. ಕೊಡವ ಹಾಗೂ ಗೌಡ ಜನಾಂಗದವರು ಒಂದಾಗಿ ಜಿಲ್ಲೆಯ ಮೂಲ ಸಂಸ್ಕೃತಿಯನ್ನು ಉಳಿಸಲು ಪಣತೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಚೇರಳ ಗೌಡ ಸಂಘದ ಕಟ್ಟದ ಉದ್ಘಾಟನೆ ಕೂಡ ಶೀಘ್ರದಲ್ಲೇ ನಡೆಯಲಿ ಹಾಗೂ ಕಟ್ಟಡÀ ಕಾಮಗಾರಿಗಳಿಗೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದೆಂದು ಮಣಿ ಉತ್ತಪ್ಪನವರು ಹೇಳಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಚೇರಳ ಗೌಡ ಸಂಘದ, ಯುವ ಬಿಗ್ರೇಡ್‌ನ ಯುವಕರ ಪಡೆ ಅಚ್ಚುಕಟ್ಟಾಗಿ ಮೈದಾನ ವ್ಯವಸ್ಥೆಯನ್ನು ಮಾಡಿದ್ದಾರೆ. ಕ್ರೀಡೆ ಬರೀ ಕ್ರೀಡೆಗೆ ಸೀಮಿತವಾಗದೆ, ಗೌಡ ಕುಟುಂಬಗಳ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲಾ ಗೌಡ ಕುಟುಂಬಗಳು ಒಂದೇ ವೇದಿಕೆಯಲ್ಲಿ ಭಾಗವಹಿಸುವುದರಿಂದ ಕುಟುಂಬಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ, ಇತ್ತೀಚಿನ ದಿನಗಳಲ್ಲಿ ಯವಕರು ಆಧುನಿಕ ಯುಗದಲ್ಲಿ ಮುಳುಗಿ ಹೋಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಖಿನ್ನತೆಗೆ ಒಳಗಾಗುತ್ತಿರುವ ಆತಂಕಕಾರಿ ಸುದ್ದಿಗಳು ದಿನನಿತ್ಯ ನಾವು ಓದುತ್ತಿದ್ದೇವೆ. ಕ್ರೀಡೆಯಿಂದ ಯುವಕರು ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದ್ದು, ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಆರ್.ಜೆ. ತ್ರಿಶೂಲ್ ನಿರೂಪಿಸಿ, ಚೇರಳ ಗೌಡ ಸಂಘದ ಖಜಾಂಚಿ ಹಾಗೂ ನಿವೃತ್ತ ಎ.ಎಸ್.ಐ. ಮುಕ್ಕಾಟಿ ಪಳಂಗಪ್ಪ ವಂದಿಸಿದರು. ಈ ಸಂದರ್ಭ ಚೇರಳ ಗೌಡ ಸಂಘದ ವಿವಿಧ ಕುಟುಂಬಗಳ ಸದಸ್ಯರು ಹಾಜರಿದ್ದರು.
ಮೊದಲ ಉದ್ಘಾಟನಾ ಪಂದ್ಯದಲ್ಲಿ ಪಟ್ಟೆಮನೆ ತಂಡವು ೨-೦ ಗೋಲುಗಳ ಅಂತರದಿAದ ಕಲ್ಪಡ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು ಶುಕ್ರವಾರ ಆರಂಭಗೊAಡಿರುವ ಗೌಡ ಕುಟುಂಬಗಳ ಕಾಲ್ಚೆಂಡು ಪಂದ್ಯಾವಳಿಯಲ್ಲಿ ೪೦ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿದೆ. ಭಾನುವಾರ ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಫೈನಲ್ ಪಂದ್ಯಾಟ ನಡೆಯಲಿದೆ.
-ಕೆ.ಎಂ. ಇಸ್ಮಾಯಿಲ್, ಕಂಡಕರೆ