ಸಿದ್ದಾಪುರ, ಮಾ ೨೫: ಮಾಲ್ದಾರೆಯ ದೊಡ್ಡಹಡ್ಲು ಹಾಡಿಯ ರಸ್ತೆಗೆ ರೂ ೮೦ ಲಕ್ಷದ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ಮಾಲ್ದಾರೆಯ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ದೊಡ್ಡಹಡ್ಲು ಹಾಡಿಯ ರಸ್ತೆಯು ಕಳೆದ ಸುಮಾರು ವರ್ಷಗಳಿಂದ ಹದಗೆಟ್ಟಿತ್ತು.

ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ. ೮೦ ಲಕ್ಷದ ಕಾಮಗಾರಿ ಭೂಮಿಪೂಜೆ ನೆರವೇರಿಸಿದ ನಂತರ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾವೇರಿ ನೀರಾವರಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಪಂಗಡಗಳ ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶ ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದರು. ಈಗಾಗಲೇ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ರೂ. ೧ ಕೋಟಿ ೨೦ ಲಕ್ಷ ಅನುದಾನವನ್ನು ನೀಡಲಾಗಿದೆ ಎಂದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳು ಆಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕೆಂದರು.

ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಪಶ್ಚಿಮಘಟ್ಟ ಕಾರ್ಯ ಪಡೆಯ ಅಧ್ಯಕ್ಷ ರವಿಕುಶಾಲಪ್ಪ, ಗ್ರಾ.ಪಂ. ಅಧ್ಯಕ್ಷ ಸಮೀರ್, ಸದಸ್ಯರುಗಳಾದ ಶೋಭ, ಚಂದ್ರ, ಕುಂಞಣ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ಜೋಸೆಫ್ ಬಿ.ಜೆ.ಪಿ ಪ್ರಮುಖರಾದ ಅಜನೀಕಂಡ ರಘು ಕರುಂಬಯ್ಯ, ಸೂದನ ಯತೀಶ್, ಗ್ರಾ.ಪಂ ಮಾಜಿ ಸದಸ್ಯರುಗಳಾದ ಸತೀಶ್, ರವಿ ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಎಳಕಟ್ಟೆ ರಸ್ತೆ ಕಾಮಗಾರಿ ರೂ. ೮೦ ಲಕ್ಷದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಸದಸ್ಯರುಗಳಾದ ಮೇಕೇರಿರ ಅರುಣ, ಮಾದೇವಿ, ಬಿಜೆಪಿ ಪಕ್ಷದ ಪ್ರಮುಖರಾದ ಅಪ್ಪು ಸುಬ್ರಮಣಿ, ಅಜಿತ್ ಕರುಂಬಯ್ಯ, ರಾಮಚಂದ್ರ, ದಿನೇಶ್ ಇನ್ನಿತರರು ಹಾಜರಿದ್ದರು.