ಕುಶಾಲನಗರ, ಮಾ. ೨೪,: ಕೇರಳ ರಾಜ್ಯದಿಂದ ಜಿಲ್ಲೆಯ ಗಡಿ ದಾಟಿ ಪ್ರವಾಸಿಗರನ್ನು ಕರೆದೊಯ್ಯುವ ಬಸ್‌ಗಳನ್ನು ಪತ್ತೆಹಚ್ಚಿ ತೆರಿಗೆ ಸಂಗ್ರಹಿಸುವ ಕಾರ್ಯಾಚರಣೆಯನ್ನು ಮೋಟಾರು ವಾಹನ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿ ಲಕ್ಷಾಂತರ ಮೊತ್ತದ ತೆರಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದಿಂದ ರಾಜ್ಯಕ್ಕೆ ಬರುವ ಬಸ್ಸುಗಳು ಪ್ರತಿ ಟ್ರಿಪ್‌ಗೆ ರೂ. ೧೭ ಸಾವಿರ ಮೊತ್ತದ ತೆರಿಗೆ ಸಂದಾಯ ಮಾಡಬೇಕಿದ್ದು, ತೆರಿಗೆ ಪಾವತಿ ಮಾಡದೆ ಸರ್ಕಾರದ ಆದಾಯಕ್ಕೆ ಕುತ್ತು ತರುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮತ್ತು ಕೊಡಗು ಜಿಲ್ಲಾ ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸುಮಾರು ಎರಡು ಲಕ್ಷ ರೂಗಳಿಗೂ ಹೆಚ್ಚಿನ ತೆರಿಗೆ ಕಲೆಹಾಕಿದ್ದಾರೆ. ಬುಧವಾರದಿಂದ ಈ ಕಾರ್ಯಾಚರಣೆ
(ಮೊದಲ ಪುಟದಿಂದ) ನಡೆದಿದ್ದು ಗುರುವಾರ ಕೂಡ ಅಧಿಕಾರಿಗಳು ತೆರಿಗೆ ಸಂಗ್ರಹಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕೇರಳ ದಿಂದ ಬರುವ ಪ್ರವಾಸಿಗರ ಬಸ್ ಗಳಿಗೆ ಗಡಿಭಾಗದಲ್ಲಿ ತೆರಿಗೆ ಸಂಗ್ರಹಿಸುವ ಯಾವುದೇ ಚೆಕ್ ಪೋಸ್ಟ್ ಇಲ್ಲದಿರುವ ಕಾರಣ ಕೇರಳದ ಬಸ್ ಗಳು ತೆರಿಗೆ ಪಾವತಿಸುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಲು ಕಾರಣ ಎನ್ನಲಾಗಿದೆ. ಕೇರಳ ಮತ್ತು ಕೊಡಗು ಜಿಲ್ಲೆ ಗಡಿಭಾಗಗಳಲ್ಲಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವ ಕಾರಣ ಬಹುತೇಕ ಬಸ್ಸುಗಳು ಜಿಲ್ಲೆ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತವೆ. ಈ ಬಗ್ಗೆ ‘‘ಶಕ್ತಿ’’ ಈ ಹಿಂದೆ ವರದಿ ಮಾಡಿತ್ತು.
ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ೧೫ರಿಂದ ೨೦ ಕೇರಳ ರಾಜ್ಯದಿಂದ ಪ್ರವಾಸಿಗರ ಬಸ್ಸುಗಳನ್ನು ಪತ್ತೆಹಚ್ಚಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಆರ್ ಟಿ ಒ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
-ಚಂದ್ರ ಮೋಹನ್