ಗೋಣಿಕೊಪ್ಪಲು, ಮಾ. ೨೪: ಸರ್ವೆಕಾರ್ಯಕ್ಕೆ ಆಗಮಿಸುವುದಾಗಿ ಕಂದಾಯ ಇಲಾಖೆಯಿಂದ ತಹಶೀಲ್ದಾರರು ಅಧಿಕೃತವಾಗಿ ನೋಟೀಸ್ ಜಾರಿಗೊಳಿಸಿ ಕೊನೆ ಹಂತದಲ್ಲಿ ಸರ್ವೆಕಾರ್ಯವನ್ನು ನಡೆಸದೆ ಬಡವರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ ಗ್ರಾಮದ ಪ್ರಮುಖರು ಕೂಡಲೇ ಸರ್ವೆಕಾರ್ಯ ನಡೆಸುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಪ್ರಮುಖರಾದ ಪಣಿಯವರ ಕೆ. ಕಾವಲ, ಬಡವರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. ೨೯/೧ರÀಲ್ಲಿರುವ ೧೮.೪೮ ಎಕರೆ ಸರ್ಕಾರಿ ಜಮೀನು ಮೋಜಣಿ ಕಾರ್ಯದಿಂದ ಗುರುತಿಸಲು ಪೊನ್ನಂಪೇಟೆ ತಹಶೀಲ್ದಾರರು ತಾ.೧೫ರಂದು ಆದೇಶ ನೀಡಿ ತಾ. ೨೪ ರಂದು ದಿನಾಂಕ ನಿಗದಿಗೊಳಿಸಿದ್ದರು.

ಸರ್ವೆಕಾರ್ಯಕ್ಕೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನೂರಾರು ಪೊಲೀಸರು ಮುಂಜಾನೆಯೇ ಜಮಾವಣೆಗೊಂಡಿದ್ದರು. ವಿವಾದದಲ್ಲಿದ್ದ ಸರ್ವೆಕಾರ್ಯದ ಜಾಗದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಹಜವಾಗಿ ಆಗಮಿಸಿದ್ದರು. ಆದರೆ ಸಮಯ ಮೀರುತ್ತಿದ್ದರೂ ತಹಶೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳು ಇತ್ತ ಸುಳಿಯಲಿಲ್ಲ. ನೆರೆದಿದ್ದ ಗ್ರಾಮಸ್ಥರು ಈ ಬಗ್ಗೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಬಯಸಿದರು. ಈ ವೇಳೆ ಸಮರ್ಪಕ ಉತ್ತರ ನೀಡುವಲ್ಲಿ ಅಧಿಕಾರಿಗಳು ನುಣುಚಿಕೊಂಡರು ಎಂದು ಆರೋಪಿಸಿದರು.

ಕೆ. ಬಾಡಗ ಗ್ರಾಮದ ಹಲವು ಮಂದಿ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಆಗಮಿಸಿ ಅಲ್ಲಿದ್ದ ತಹಶೀಲ್ದಾರರನ್ನು ಸರ್ವೆ ಕಾರ್ಯ ನಡೆಸಲು ಹಿಂದೇಟು ಹಾಕಿರುವ ಬಗ್ಗೆ ಮಾಹಿತಿ ಬಯಸಿದರೂ ಈ ವೇಳೆ ತಹಶೀಲ್ದಾರರು ಹಾರಿಕೆ ಉತ್ತರ ನೀಡಿ ನುಣಚಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಹಶೀಲ್ದಾರರ ಕಾರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಜಾಗವನ್ನು ಸರ್ವೆಕಾರ್ಯ ನಡೆಸುವಂತೆ ಆಗ್ರಹಿಸಿ ಕಳೆದ ಹಲವು ದಿನಗಳ ಹಿಂದೆ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ ವತಿಯಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೂಡಲೇ ಸರ್ವೆಕಾರ್ಯ ನಡೆಸುವಂತೆ ತಹಶೀಲ್ದಾರಿಗೆ ನಿರ್ದೇಶನ ನೀಡಿದ್ದರು. ಹಿರಿಯ ಅಧಿಕಾರಿಗಳ ಆದೇಶದ ಮೇರೆ ಸರ್ವೆಕಾರ್ಯ ನಡೆಸುವುದಾಗಿ ಒಪ್ಪಿಗೆ ನೀಡಿದ ಹಿನೆÀ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿತ್ತು. ಇದೀಗ ಸರ್ವೆಕಾರ್ಯ ನಡೆಸಲು ತಹಶೀಲ್ದಾರರು ಹಿಂದೇಟು ಹಾಕಿರುವುದನ್ನು ಮನಗಂಡು ತಾ. ೨೮ ರಿಂದ ತಹಶೀಲ್ದಾರ್ ಕಚೇರಿಯ ಮುಂದೆ ದಲಿತ ಸಂಘರ್ಷ ಸಮಿತಿ ಹಾಗೂ ಗ್ರಾಮಸ್ಥರು ಸೇರಿ ಅಮರಣಾಂತರ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ಕೆ. ಬಾಡಗ ಗ್ರಾಮದ ಗ್ರಾಮಸ್ಥರಾದ ಯರವರ ಕಾವಲ ಅವರು ತಿಳಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ವೈ.ಜೆ. ದರ್ಶನ್, ಜವರ, ಮಂಜು ಪಿ.ಎಂ. ಹಾಗೂ ಪಿ.ವಿ. ಮಣಿ ಉಪಸ್ಥಿತರಿದ್ದರು.