ಮಡಿಕೇರಿ,ಮಾ.೨೩; ಐತಿಹಾಸಿಕ ಮಡಿಕೇರಿ ಕೋಟೆ ನವೀಕರಣ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಜೂನ್ ೨೬ಕ್ಕೆ ಮುಂದೂಡಿದೆ.
ಪುರಾತನ ಕೋಟೆ ಅರಮನೆ ನವೀಕರಣ ಕಾರ್ಯ ಹಾಗೂ ರಾಜರ ಗದ್ದುಗೆ ಜಾಗ ಒತ್ತುವರಿ ತೆರವು ಕಾರ್ಯ ವಿಳಂಬವಾಗುತ್ತಿದೆ ಎಂದು ನಿವೃತ್ತ ಆರ್.ಟಿ.ಐ. ಕಮಿಷನರ್ ಜೆ.ಎಸ್.ವಿರೂಪಾಕ್ಷಯ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಇಂದು ವಿಚಾರಣೆಗೆ ಬಂದಿದ್ದು, ಅರ್ಜಿದಾರರ ಪರ ವಕೀಲ ಎನ್.ರವೀಂದ್ರ ಕಾಮತ್ ವಾದ ಮಂಡಿಸಿದರು. ಕೋಟೆ ಅರಮನೆ ನವೀಕರಣ ಕಾರ್ಯ ಆಮೆಗತಿಯಲ್ಲಿ ಸಾಗಿದರೆ ಮಳೆಗಾಲದ ಒಳಗಡೆ ಕೆಲಸ ಪೂರ್ಣಗೊಳ್ಳುವದಿಲ್ಲ. ಎಲ್ಲ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ, ಗದ್ದುಗೆ ಬಳಿ ಇರುವ ಸರಕಾರಿ ಜಾಗ ಅತಿಕ್ರಮಣ ಮಾಡಿರುವದನ್ನು ತೆರವುಗೊಳಿಸುವ ಬಗ್ಗೆ ನ್ಯಾಯಾಲಯದ ಆದೇಶವಿ ದ್ದರೂ ತಹಶೀಲ್ದಾರರು ಪ್ರಮಾಣ ಪತ್ರ ಸಲ್ಲಿಸಿರುವದಿಲ್ಲ. ತನಿಖೆ ನಡೆಸು ವಂತೆ ತಹಶೀಲ್ದಾರರಿಗೆ ಆದೇಶಿಸಿ ದ್ದರೂ ಇದುವರೆಗೆ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ಹಾಗಾಗಿ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಮತ್ ನ್ಯಾಯಾಲಯವನ್ನು ಕೋರಿದರು. ಸರಕಾರಿ ಪರ ವಕೀಲ ವಿಜಯಕುಮಾರ್ ಪಾಟೀಲ್ ನ್ಯಾಯಾಲಯದ ಆದೇಶ ಪಾಲನೆ ಮಾಡುವದಾಗಿ ಭರವಸೆ ನೀಡಿದರು.
ವಾದ, ವಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರೀತುರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿ ಕೃಷಣಕುಮಾರ್ ಅವರುಗಳು ವಿಚಾರಣೆಯನ್ನು ಜೂನ್ ೨೦ಕ್ಕೆ ಮುಂದೂಡಿದರು. ಮಡಿಕೇರಿ ಕೋಟೆ ನವೀಕರಣಕ್ಕೆ ಸರಕಾರ ರೂ. ೯.೫೦ ಕೋಟಿ ಮಂಜೂರು ಮಾಡಿದ್ದು, ಆ ಅನುದಾನದಲ್ಲಿ ನವೀಕರಣ ಕಾರ್ಯ ಸಾಗುತ್ತಿದೆ.