ಪೆರಾಜೆ, ಮಾ. ೨೩: ಇಲ್ಲಿಯ ಗಡಿಗುಡ್ಡೆಯ ಸಮೀಪ ಬೈಕ್ ಹಾಗೂ ಜೀಪ್ ಮಧ್ಯೆ ಅಪಘಾತ ನಡೆದು ಬೈಕ್‌ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಪೆರಾಜೆ ರಾಮಕಜೆ ವೆಂಕಪ್ಪರವರ ಪುತ್ರ ದರ್ಶನ್ ಮತ್ತು ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಸುಳ್ಯದ ಸೆಂಟ್ ಜೋಸೆಫ್ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಇಂದು ಪರೀಕ್ಷೆ ಮುಗಿಸಿ ಇಬ್ಬರು ಬೈಕಿನಲ್ಲಿ ಮನೆಗೆ ತೆರಳುವ ಸಂದರ್ಭ ಕುಂಬಳಚೇರಿ ಸಮೀಪದ ಗಡಿಗುಡ್ಡೆ ಎಂಬಲ್ಲಿ ಎದುರಿನಿಂದ ಬರುತಿದ್ದ ಜೀಪ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹೊಡೆದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿದೆ. ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ವಿಶ್ವದೀಪ್ ಕುಂದಲ್ಪಾಡಿ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡಿರುವ ದರ್ಶನ್ ರಾಮಕಜೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಪಟ್ಟ ವಿಶ್ವದೀಪ್ ಕುಂದಲ್ಪಾಡಿ ಪ್ರತಿಭಾವಂತ ಯುವ ಗಾಯಕನಾಗಿದ್ದು, ನಮ್ಮ ಟಿ.ವಿ, ಸುಮಧುರ ಸಂಗೀತ ಕಾರ್ಯಕ್ರಮ ಸೇರಿದಂತೆ ಅನೇಕ ವೇದಿಕೆಗಳಲ್ಲಿ ತನ್ನ ಗಾನ ಪ್ರದರ್ಶನ ನೀಡಿರುತ್ತಾನೆ.