'ಸೋಮವಾರಪೇಟೆ, ಮಾ. ೨೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನನಿಬಿಡ ಪ್ರದೇಶ ಗಳಲ್ಲಿಯೇ ಗುಂಡಿಗಳು ನಿರ್ಮಾಣವಾಗಿದ್ದು, ಮರಣ ಬಾವಿಗಳಂತೆ ಪರಿವರ್ತನೆಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ಎಂಬ ಹೆಗ್ಗಳಿಕೆ ಸೋಮವಾರಪೇಟೆಗಿದ್ದು, ಇದೀಗ ಅತೀ ಹೆಚ್ಚು ಗುಂಡಿಗಳನ್ನು ಹೊಂದಿರುವ ಪಂಚಾಯಿತಿ ಎಂಬ ಬಿರುದು ಪಡೆಯಲು ಮುಂದಾಗಿದೆಯೇ? ಎಂಬ ಸಂಶಯ ಸಾರ್ವಜನಿಕರದ್ದು.
ಪಟ್ಟಣ ಪಂಚಾಯಿತಿ ಕಚೇರಿಗೆ ಪ್ರವೇಶ ಕಲ್ಪಿಸುವ ಸ್ಥಳದಲ್ಲಿಯೇ ಗುಂಡಿ ನಿರ್ಮಾಣಗೊಂಡಿದ್ದು, ವಾಹನ ಸವಾರರಿಗೆ ಸಂಚಕಾರವಾಗಿದೆ. ಪಟ್ಟಣ ಪಂಚಾಯಿತಿ ಪಕ್ಕದಿಂದ ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ಸ್ಥಳದಲ್ಲಿ ಕಾಂಕ್ರೀಟ್ ಸ್ಲಾö್ಯಬ್ ಕಿತ್ತು ಬಂದಿದ್ದು, ಗುಂಡಿ ನಿರ್ಮಾಣವಾಗಿದೆ. ಈ ಗುಂಡಿಯಲ್ಲಿ ಸಿಲುಕಿ ಹಲವಷ್ಟು ದ್ವಿಚಕ್ರ ಸವಾರರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಅಧ್ಯಕ್ಷರು ಸೇರಿದಂತೆ ಸದಸ್ಯರುಗಳು ಕಚೇರಿಗೆ ಆಗಮಿಸುವ ಸಂದರ್ಭ ಈ ಗುಂಡಿ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಹಲವಷ್ಟು ಬಾರಿ ಇವರುಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ವರ್ತಕರು ಪ.ಪಂ. ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಕೆ.ಸುಬ್ಬಯ್ಯ ರಸ್ತೆಯಿಂದ ಮಾರ್ಕೆಟ್ ಏರಿಯಾಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯ ಮಧ್ಯ ಭಾಗದಲ್ಲಿಯೇ ಮರಣ ಬಾವಿ ನಿರ್ಮಾಣವಾಗಿದೆ. ಕಳೆದ ನಾಲ್ಕೆöÊದು ತಿಂಗಳಿನಿAದಲೂ ಈ ಗುಂಡಿ ಹಾಗೆಯೇ ಇದ್ದು, ಹಲವು ಬಾರಿ ವಾಹನಗಳು ಗುಂಡಿಗೆ ಸಿಲುಕಿ ಮಾಲೀಕರು ಸಮಸ್ಯೆ ಅನುಭವಿಸಿದ್ದಾರೆ.
ಅಂತೆಯೇ ಮಡಿಕೇರಿ ರಸ್ತೆಯಿಂದ ಮಾರ್ಕೆಟ್ ಏರಿಯಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೂ ಬೃಹತ್ ಗುಂಡಿ ನಿರ್ಮಾಣವಾಗಿದೆ. ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಸೇರಿದಂತೆ ಇನ್ನಿತರ ಮೂಲಗಳಿಂದ ಕೋಟ್ಯಾಂತರ ಅನುದಾನ ಬರುತ್ತದೆ. ಕೆಲ ಸಾವಿರ ರೂಪಾಯಿಗಳನ್ನು ವ್ಯಯಿಸಿ ಗುಂಡಿ ಮುಚ್ಚಲು ಆಗುವುದಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ತಕ್ಷಣ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಗಮನಹರಿಸಿ ಗುಂಡಿಗಳನ್ನು ಮುಚ್ಚಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.