ಮಡಿಕೇರಿ, ಮಾ. ೨೪: ತಾಳತ್ತಮನೆಯ ನೇತಾಜಿ ಯುವತಿ ಮಂಡಳಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ನೇತಾಜಿ ಯುವಕ ಮಂಡಳದ ಸಭಾಂಗಣದಲ್ಲಿ ನಡೆಸಲಾಯಿತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರುಷನ ಯಶಸ್ಸಿಗೆ ಮಹಿಳೆ ಕಾರಣ. ಹೆಣ್ಣು ಸಾಧನೆ ಮಾಡಬೇಕಾದರೆ ದೃಢತೆಯನ್ನು ಹೊಂದಿರಬೇಕು. ಮನೆಯಿಂದ ಹೊರಗೆ ಹೋಗಬೇಕಾದರೆ ತನ್ನ ಸುತ್ತ ಒಂದು ಲಕ್ಷö್ಮಣ ರೇಖೆಯನ್ನು ಹಾಕಿಕೊಂಡಿರಬೇಕು ಎಂಬ ಹಿತನುಡಿಗಳನ್ನಾಡಿದರು. ಅದಲ್ಲದೆ, ಸಂಘಗಳ ಮೂಲಕ ಆರೋಗ್ಯ ಶಿಬಿರ, ಕಾನೂನು ಶಿಬಿರ ಮುಂತಾದ ಶಿಬಿರಗಳನ್ನು ನಡೆಸುವಂತೆ ತಿಳಿಸಿದರು. ಹೆಣ್ಣು - ಗಂಡು ತಾರತಮ್ಯ ಬೇಡ. ಎಲ್ಲರೂ ಸರಿಸಮಾನರು ಎಂದರು.

ಮದೆ ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎಸ್. ನವೀನ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಮಹಿಳೆ ಸಮಾಜದ ಕೇಂದ್ರ ಬಿಂದು. ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಇದಕ್ಕೆ ಉದಾಹರಣೆ ಎಂದರು.

ತಾಳತ್ತಮನೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ, ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಮಾತನಾಡಿದರು.

ನೇತಾಜಿ ಯುವಕ ಮಂಡಳದ ಅಧ್ಯಕ್ಷ ಸುದೀಪ್ ರೈ, ನೇತಾಜಿ ಯುವತಿ ಮಂಡಳಿಯ ಅಧ್ಯಕ್ಷೆ ಸರೋಜ ರೈ ಹಾಜರಿದ್ದರು.

ಯುವತಿ ಮಂಡಳಿಯ ಆಂತರಿಕ ಲೆಕ್ಕಪರಿಶೋಧಕಿ ಪದ್ಮ ರವಿ ನಿರೂಪಿಸಿ, ಮಂಜುಳಾ ಆನಂದ ಪ್ರಾರ್ಥಿಸಿ, ಮೋಹಿನಿ ಸ್ವಾಗತಿಸಿ, ಉಪಾಧ್ಯಕ್ಷೆ ವಿಶಾಲಾಕ್ಷಿ ವಂದಿಸಿದರು. ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಯುವತಿ ಮಂಡಳಿಯ ವಿಶಾಲಾಕ್ಷಿ, ರೀಟಾ ಲಿಂಗಪ್ಪ ನಡೆಸಿಕೊಟ್ಟರು. ಯುವತಿ ಮಂಡಳಿಯ ಸದಸ್ಯರೆಲ್ಲರೂ ಈ ಸಂದರ್ಭ ಹಾಜರಿದ್ದರು.