ಮಡಿಕೇರಿ, ಮಾ. ೨೪: ಮೂಲತಃ ಗೋಣಿಕೊಪ್ಪದವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ರಾಜಪ್ಪ ಅವರಿಗೆ ‘ವಿಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ (ಭಾರತವನ್ನು ಬದಲಾಯಿಸುತ್ತಿರುವ ಮಹಿಳೆಯರು) ಎಂಬ ಪ್ರಶಸ್ತಿ ದೊರಕಿದೆ. ವಿಜ್ಞಾನಿ ಟೆಸ್ಸಿ ಥಾಮಸ್ ಹಾಗೂ ಕಿರಣ್ ಬೇಡಿ ಅವರಿಂದ ಈ ಪ್ರಶಸ್ತಿಯನ್ನು ತಾ.೨೧ ರಂದು ನವದೆಹಲಿಯಲ್ಲಿ ಅವರು ಸ್ವೀಕರಿಸಿದರು.

ಎನ್.ಐ.ಟಿ.ಐ (ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ಆಯೋಗದ ವತಿಯಿಂದ ನೀಡಲ್ಪಡುವ ಈ ಪ್ರಶಸ್ತಿ ಮಹಿಳಾ ಉದ್ಯಮಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದೆನಿಸಿದೆ. ಯುನೈಟೆಡ್ ನೇಷನ್ಸ್ ನಿಂದಲೂ ಈ ಪ್ರಶಸ್ತಿಗೆ ಬೆಂಬಲವಿದೆ. ನೆಕ್ಟರ್ ಫ್ರೆಶ್ ಸಂಸ್ಥೆ ಸ್ಥಾಪಿಸಿರುವ ಇವರು, ಸಂಸ್ಥೆಯ ಮೂಲಕ ಮಾಡಿರುವ ಸೇವೆ ಪರಿಗಣಿಸಲ್ಪಟ್ಟು ಉತ್ಪಾದನಾ ವಲಯದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.