ಮಡಿಕೇರಿ, ಮಾ. ೨೩: ಜಿಲ್ಲೆಯಾದ್ಯಂತ ಜನರು ಮಳೆಗಾಗಿ ಕಾಯುತ್ತಿದ್ದಾರೆ. ಬೇಸಿಗೆ ಸಂದರ್ಭದ ಆರಂಭಿಕ ಮಳೆ ಪ್ರಸ್ತುತದ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದ್ದು, ಕಳೆದ ಒಂದೆರಡು ದಿನಗಳಿಂದ ವಾಯುಭಾರ ಕುಸಿತದ ಪರಿಣಾಮದಿಂದ ಎಂಬAತೆ ಅಲ್ಲಲ್ಲಿ ಮಳೆಯಾಗಿದೆ. ಕೆಲದಿನಗಳ ಹಿಂದೆ ನಾಪೋಕ್ಲು ವಿಭಾಗಕ್ಕೆ ಹೆಚ್ಚು ಮಳೆಯಾಗಿದೆ. ಎರಡು ದಿನಗಳ ಹಿಂದೆ ಬಿರುನಾಣಿ, ಪರಕಟಗೇರಿ ವ್ಯಾಪ್ತಿಯಲ್ಲೂ ಸುಮಾರು ಒಂದರಿAದ ಒಂದೂವರೆ ಇಂಚು ಮಳೆಯಾಗಿದೆ. ಆದರೆ ಉಳಿದಂತೆ ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಮಳೆಯ ಸಿಂಚನವಾಗಿದ್ದರೂ ಜನತೆಯ ನಿರೀಕ್ಷೆಗೆ ತಕ್ಕಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಮಡಿಕೇರಿ ನಗರಕ್ಕೂ ಕೆಲವು ಸೆಂಟ್‌ನಷ್ಟು ಮಾತ್ರ ಮಳೆಯಾಗಿತ್ತು. ತಾ. ೨೩ ರಂದು ಒಂದಷ್ಟು ಮಳೆಯ ಸಿಂಚನವಾಗಿದೆ. ಗೋಣಿಕೊಪ್ಪಲುವಿಗೆ ಇಂದು ಅಪರಾಹ್ನ ಒಂದಷ್ಟು ಮಳೆ ಸುರಿದಿದೆ. ಬಾಳೆಲೆ, ಪಾಲಿಬೆಟ್ಟ, ಅತ್ತೂರು, ಅಮ್ಮತ್ತಿ ವಿಭಾಗದಲ್ಲೂ ಸಣ್ಣ ಪ್ರಮಾಣದ ಮಳೆಯಾಗಿರುವ ಕುರಿತು ವರದಿಯಾಗಿದೆ.

ಹುದಿಕೇರಿ, ಕುಟ್ಟ, ಶ್ರೀಮಂಗಲ, ಕುರ್ಚಿ, ಬೀರುಗ, ನೆಮ್ಮಲೆ, ಕುಮಟೂರು, ಕಾಯಮಾನಿ ವಿಭಾಗದಲ್ಲಿ ತುಸು ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ವಾಯಭಾರ ಕುಸಿತದ ಪರಿಣಾಮದಿಂದ ಇನ್ನು ಒಂದೆರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಈ ದಿನಗಳಲ್ಲಿ ಮಳೆಯಾಗುವ ಆಶಾಭಾವನೆಯಿದೆ.